ಪೊಲೀಸ್ ಭದ್ರತೆಯೊಂದಿಗೆ ಬಸ್‌ಗಳ ಸಂಚಾರ: ಬಳ್ಳಾರಿ ಜಿಲ್ಲೆಯಲ್ಲಿ ತಗ್ಗಿದ ಸಾರಿಗೆ ಮುಷ್ಕರದ ಬಿಸಿ

141220 Ballari Bus Strike Passenger on busstand
ಬಸ್‌ಗಳ ಸಂಚಾರ ಮರು ಆರಂಭವಾಗಿದೆಂಬ ಸುದ್ದಿ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಜನರು.
Published on

ಬಳ್ಳಾರಿ: ಜಿಲ್ಲೆಯಲ್ಲಿ ಸೋಮವಾರ ಸಾರಿಗೆ ಮುಷ್ಕರದ ಬಿಸಿ ಸ್ವಲ್ಪ ತಗ್ಗಿದ್ದು ಕಂಡು ಬಂತು. ಪೊಲೀಸ್ ಭದ್ರತೆಯೊಂದಿಗೆ ಕೆಲವು ಬಸ್‌ಗಳು ಸಂಚರಿಸಿದವು. ಆದರೂ, ಪ್ರಯಾಣಿಕರ ಪರದಾಟ ತಪ್ಪಲಿಲ್ಲ. ಖಾಸಗಿ ವಾಹನಗಳ ಸುಲಿಗೆಯೂ ಮುಂದುವರಿಯಿತು.

ಸಾರಿಗೆ ಮುಷ್ಕರ ಹಿಂಪಡೆಯುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಜನರು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಮುಷ್ಕರ ಹಿಂಪಡೆಯದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕೆಲ ಬಸ್‌ಗಳ ಸಂಚಾರ ಆರಂಭಿಸಲಾಯಿತು. ಹೊಸಪೇಟೆ, ಸಿಂಧನೂರು ಹಾಗೂ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್ ಕಡೆಗೆ ಬಸ್‌ಗಳು ಸಂಚರಿಸಿದವು. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಬಹುತೇಕ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲಿಲ್ಲ. ಇದರಿಂದಾಗಿ ಪ್ರಯಾಣಿಕರು ಬಸ್‌ಗಳು ಬರಬಹುದು ಎಂದು ಕಾದು ಕುಳಿತಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ರಾಯಚೂರು ಮೂಲದ ನಾಸೀರ್ ಮುಷ್ಕರದಿಂದಾಗಿ ಎರಡು ದಿನ ನಗರದಲ್ಲಿ ಸ್ನೇಹಿತನ ಮನೆಯಲ್ಲಿದ್ದು, ಸೋಮವಾರ ಸಿಂಧನೂರಿಗೆ ಬಸ್‌ನಲ್ಲಿ ಪ್ರಯಾಣಿಸಿದರು. ದೂರದ ಊರುಗಳಿಗೆ ಕೆಲ ಬಸ್‌ಗಳ ಸಂಚಾರ ಆರಂಭವಾದರೂ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳ ಸಂಚಾರ ಇರಲಿಲ್ಲ. ನಗರ ಕೇಂದ್ರ ಬಸ್ ನಿಲ್ದಾಣದ ವಿಚಾರಣಾ ಸಂಖ್ಯೆಗೆ ಜನರು ದೂರವಾಣಿ ಕರೆ ಮಾಡಿ ಬಸ್‌ಗಳ ಆರಂಭದ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net