

ಮಂಗಳೂರು: ನಗರದ ಹೊರ ವಲಯದ ಪಾವಂಜೆ ಸೇತುವೆಯಿಂದ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ಸಕಾಲದಲ್ಲಿ ರಕ್ಷಣೆ ಮಾಡಿ ವಾರಸುದಾರರ ಜತೆ ಕಳುಹಿಸಿ, ಜೀವ ಉಳಿಸಿದ ವಿದ್ಯಮಾನ ಸೋಮವಾರ ನಡೆದಿದೆ.
ಪ್ರಕರಣ ವಿವರ: ಆ.4ರಂದು ಬರ್ಕೆ ಪೊಲೀಸ್ ಠಾಣೆ ಸರಹದ್ದಿಗೆ ಒಳಪಟ್ಟು ಪಿ.ವಿ.ಎಸ್ ಕಲಾಕುಂಜದ ಬಳಿಯ 75ವರ್ಷದ ನಿವಾಸಿಯೊಬ್ಬರು ಬೆಳಗ್ಗೆ ಕುದ್ರೋಳಿ ದೇವಸ್ಥಾನಕ್ಕೆಂದು ತೆರಳಿದ್ದರು. ಬಳಿಕ ಮನೆಗೆ ಮರಳದೆ ಇರುವ ಕಾರಣ ಬರ್ಕೆ ಪೊಲೀಸ್ ಠಾಣೆಗೆ ಮನೆಯವರು ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಬರ್ಕೆ ಪೊಲೀಸ್ ಠಾಣೆಯ ಎ.ಎಸ್.ಐ ಸುಧಾಕರ್ ಇಆರ್‌ಎಸ್‌ಎಸ್-112 ಗೆ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.
ಮುಲ್ಕಿಯಲ್ಲೂ ಅಲರ್ಟ್: 112 ಕರೆಯಾದ ಕಾರಣ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಅಲರ್ಟ್ ಆಗಿದ್ದು, ಹೆಡ್‌ಕಾನ್ಸ್ಟೇಬಲ್‌ರವರಾದ ಯೊಗೀಶ್, ಕಿಶೋರ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಮಧುಕರ್ ಅವರುಗಳು ಮಾಹಿತಿಯನ್ನು ಸ್ವೀಕರಿಸಿ ಶೀಘ್ರ ಕಾರ್ಯಪ್ರವೃತ್ತರಾಗಿದ್ದರು. ಈ ಸಂದರ್ಭ ಬಾತ್ಮೀದಾರರ ಮಾಹಿತಿಯ ಮೇರೆಗೆ ಪಾವಂಜೆ ಬ್ರಿಡ್ಜ್ ಬಳಿ ತೆರಳಿದಾಗ ಪಾವಂಜೆ ಬ್ರಿಡ್ಜ್ ದಂಡೆಯ ಮೇಲಿನಿಂದ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ 75ವರ್ಷದ ಪಿವಿಎಸ್ ಕಲಾಕುಂಜ ಬಳಿ ನಿವಾಸಿಯನ್ನು ಸಾರ್ವಜನಿಕರ ಸಹಾಯದೊಂದಿಗೆ ಸಕಾಲದಲ್ಲಿ ತಡೆದು ಜೀವ ರಕ್ಷಿಸಲಾಯಿತು.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಖಾಯಿಲೆಯಿಂದ ಬಳಲುತ್ತಿರುವ ವಿಚಾರದಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಂದು ಗೊತ್ತಾಗಿದೆ. ಅವರನ್ನು ಅವರ ಸಹೋದರಿ ಹಾಗೂ ಸ್ಥಳೀಯ ಮಾಜಿ ಕಾರ್ಪೊರೇಟರ್ ಜತೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.