

ಬೆಳಗಾವಿ: ನಗರದಲ್ಲಿ ಭಾನುವಾರ ಜರುಗಿದ್ದ ಸಿಎಆರ್, ಡಿಎಆರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸರು ದಲ್ಲಾಳಿಯೊಬ್ಬನನ್ನು ಸೋಮವಾರ ಬಂಧಿಸಿದ್ದಾರೆ. ಗೋಕಾಕದ ಮಲ್ಲಾಪುರ ಪಿ.ಜಿ. ಗ್ರಾಮದ ಧರೆಪ್ಪ ಹಾಲಪ್ಪ ಅಂತರಗಟ್ಟಿ ಬಂಧಿತ ವ್ಯಕ್ತಿ.
ಈತ ಪರೀಕ್ಷಾರ್ಥಿಗಳ ಪರವಾಗಿ ನಕಲಿ ಅಭ್ಯರ್ಥಿಗಳನ್ನು ಸಿದ್ಧಪಡಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ನಕಲಿ ಅಭ್ಯರ್ಥಿಗೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದ ಎಂಬ ಅನುಮಾನದ ಮೇಲೆ ಘಟಪ್ರಭಾದ ಬಸವರಾಜ ಎನ್ನುವ ಫೋಟೋಗ್ರಾಫರ್‌ನನ್ನೂ ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಗೆ ಗೋಕಾಕ ತಾಲೂಕಿನ ರೋಹನ ಜೋಡಟ್ಟಿ ಎನ್ನುವ ಅಭ್ಯರ್ಥಿ ಪರವಾಗಿ ಅದೇ ಊರಿನ ಕೃಷ್ಣ ಐಹೊಳೆ ಎಂಬಾತ ಪರೀಕ್ಷೆ ಬರೆಯಲು ಬಂದಿದ್ದ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಇದನ್ನು ಪತ್ತೆ ಮಾಡಿ, ಕೃಷ್ಣನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಅದೇ ದಿನ ಈ ಇಬ್ಬರ ಜತೆಗೆ ರೋಹನ್ ಜೋಡಟ್ಟಿ ಅವರ ತಂದೆಯನ್ನೂ ಟಿಳಕವಾಡಿ ಪೊಲೀಸರು ಬಂಧಿಸಿದ್ದರು.
ಇದರೊಂದಿಗೆ ಭಾನುವಾರ ನಡೆದ ಪೊಲೀಸ್ ಪರೀಕ್ಷೆಯಲ್ಲಿ ಇನ್ನಷ್ಟು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರಬಹುದು ಎಂಬ ಅನುಮಾನ ದಟ್ಟವಾಗಿದೆ.