

ಚಿಕ್ಕಬಳ್ಳಾಪುರ: ತಾಲೂಕಿನ ಕಸವಗುಟ್ಟಹಳ್ಳಿಯಲ್ಲಿನ ದೊಡ್ಡಿಯಿಂದ ಕಳುವಾಗಿದ್ದ ೬ ಮೇಕೆಗಳನ್ನು ಪತ್ತೆ ಮಾಡಿ, ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಚಿಕ್ಕಲಬಾಲದ ಗಾರೆ ಕೆಲಸಗಾರ ವಿನೋದ್ ಶಂಕರ್ (೩೩) ಹಾಗೂ ಯಾದಗಿರಿ ಜಿಲ್ಲೆಯ ಶಹಪುರ್‌ದ ಬಾಂದು ನಾಯ್ಕ್ (೨೮) ಬಂಧಿತರು. ಆರೋಪಿಗಳಿಂದ ೧೨ ಲಕ್ಷ ಬೆಳೆಬಾಳುವ ೨ ಕಾರು, ೯೦ ಸಾವಿರ ರೂ ಬೆಲೆ ಬಾಳುವ ೬ ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೆರೇಸಂದ್ರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಸವಗುಟ್ಟಹಳ್ಳಿಯಲ್ಲಿ ರೈತ ಮುನಿಕೃಷ್ಣ ಎಂಬುವರ ದೊಡ್ಡಿಯಿಂದ ೬ ಮೇಕೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ಕೈಗೊಂಡ ಪಿಎಸ್ ಐ ಜಗದೀಶ್ ರೆಡ್ಡಿ ನೇತೃತ್ವದ ತಂಡವು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಇದರಲ್ಲಿ ಅನುಮಾನಾಸ್ಪದಾಗಿ ಓಡಾಡುತ್ತಿದ್ದ ಕಾರನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.