

ಮಂಗಳೂರು: ನಗರದ ಬಿಜೈಯ ಪಿಂಟೋ ಚೇಂಬರ್ಸ್ನ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಿಕ್ಸ್ತ್ಸೆನ್ಸ್ ಬ್ಯೂಟಿ ಸಲೂನ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉರ್ವ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಉಡುಪಿಯ ಬ್ರಹ್ಮಗಿರಿ ನಿವಾಸಿ ಸುದರ್ಶನ್ ಮಾಲೀಕತ್ವದ ಈ ಬ್ಯೂಟಿ ಸಲೂನ್ನಲ್ಲಿ ಹಲವು ಸಮಯಗಳಿಂದ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪರವಾನಗಿ ರದ್ದು: ಈ ಸಲೂನ್ಗೆ ನೀಡಲಾದ ವ್ಯಾಪಾರ ಪರವಾನಗಿಯನ್ನು ಉಲ್ಲಂಘಿಸಿ, ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವ್ಯಾಪಾರ ಪರವಾನಗಿ ರದ್ದುಗೊಳಿಸುವಂತೆ ಪೊಲೀಸರು ಮಹಾನಗರ ಪಾಲಿಕೆ ಆಯುಕ್ತರಿಗೆ ಶಿಫಾರಸು ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಲೂನ್ ಪರವಾನಗಿ ರದ್ದುಗೊಳಿಸಲಾಗಿದೆ.
ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಇಂತಹ ಸಲೂನ್ಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಕಾರ್ಯಾಚರಣೇ ನಡೆಸಿ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.