

ಕಾರವಾರ: ಪೊಲೀಸ್ ಅಧಿಕಾರಿಗಳ ಹುದ್ದೆಯನ್ನು ಅವರ ಸಮವಸ್ತ್ರದ ಮೇಲಿನ ಸ್ಟಾರ್ ಮೇಲೆ ಗುರುತಿಸಲಾಗುತ್ತದೆ. ಅದು ಇಲಾಖೆ ಅವರ ಹಿರಿತನದ ಆಧಾರದ ನೀಡುವ ಸ್ಟಾರ್. ಇನ್ನು ಜನರೂ ಪೊಲೀಸರಿಗೆ ಸ್ಟಾರ್ ರೇಟಿಂಗ್ ನೀಡಬಹುದು.
ಒಂದು ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ನಡೆದುಕೊಂಡ ಆಧಾರದ ಮೇಲೆ ಅವರು ಜನಸ್ನೇಹಿಯಾಗಿದ್ದಾರೆಯೇ ಎಂಬ ಬಗ್ಗೆ ಸ್ಟಾರ್ ರೇಟಿಂಗ್ ನೀಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ.
ಕ್ಯೂ ಆರ್ ಕೋಡ್
ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ತಿಳಿಯಲು ಪ್ರತಿ ಠಾಣೆಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯು ಲೋಕಸ್ಪಂದನ ಹೆಸರಿನಲ್ಲಿ ಪೋರ್ಟಲ್ ಒಂದನ್ನು ಪ್ರಾರಂಭಿಸಿದೆ. ಪ್ರತಿ ಠಾಣೆಗಳ ಎದುರು ಫಲಕವೊಂದನ್ನು ಅಳವಡಿಸಿದ್ದು, ಅದರಲ್ಲಿ ಕ್ಯೂಆರ್ ಕೋಡ್ ಇಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ನೇರವಾಗಿ ಲೋಕಸ್ಪಂದನ ಪೋರ್ಟಲ್ ತೆರೆದುಕೊಳ್ಳಲಿದೆ. ಪೊಲೀಸ್ ಠಾಣೆಗೆ ಭೇಟಿ ನೀಡಿದವರು ಠಾಣೆಯ ಸೇವೆಯ ಬಗ್ಗೆ ಸ್ಟಾರ್ ರೇಟಿಂಗ್ ನೀಡಬಹುದು ಅಥವಾ ಬೇರೆ ವಿಚಾರಗಳನ್ನೂ ನಮೂದಿಸಬಹುದಾಗಿದೆ. ನೇರವಾಗಿ ರಾಜ್ಯ ಮಟ್ಟದ ಅಧಿಕಾರಿಗಳು ಅದನ್ನು ನೋಡಬಹುದಾದ ವ್ಯವಸ್ಥೆ ಇದೆ. ಜಿಲ್ಲಾ ಕಂಟ್ರೋಲ್ ರೂಂನಲ್ಲಿ ಅದರ ನಿರಂತರ ಮೇಲ್ವಿಚಾರಣೆ ನಡೆಯಲಿದೆ. ರಾಜ್ಯದ ಇತರ ಕೆಲ ಜಿಲ್ಲೆಗಳಲ್ಲಿ ಈ ಬ್ಯಾನರನ್ನು ಈಗಾಗಲೇ ಅಳವಡಿಸಲಾಗಿದ್ದು, ಜಿಲ್ಲೆಯ ಎಲ್ಲ 29 ಠಾಣೆಗಳಲ್ಲಿ ಮಂಗಳವಾರ ಬ್ಯಾನರ್ ಅಳವಡಿಸಲಾಗಿದೆ.
ಇದನ್ನೂ ಓದಿ: ಟನಲ್ ವಿಚಾರ ಸಚಿವ ಎಂಎಲ್ ಸಿ ಜಗಳಬಂಧಿ
ಬ್ಯಾನರ್‌ನಲ್ಲಿ `ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಸ್ಕ್ಯಾನ್ ಮಾಡಿ, ನಿಮ್ಮ ಅಮೂಲ್ಯ ಪ್ರತಿಕ್ರಿಯೆ ಸಲಹೆ ನೀಡಿ. ನಿಮ್ಮ ನುಡಿ ನಮ್ಮ ನಡೆ-ಹೆಲ್ಪ್ ಅಸ್, ಹೆಲ್ಪ್ ಯು ಕಾನೂನುನ್ನು ಗೌರವಿಸುವವರನ್ನು ನಾವು ಗೌರವಿಸುತ್ತೇವೆ' ಎಂದು ಬರೆಯಲಾಗಿದೆ.