ನಿವೇಶನ ಹಂಚಿಕೆ ವಿವಾದ ಎಸ್ಪಿ ಅಂಗಳಕ್ಕೆ: ಮೂರು ದಿನದ ಗಡುವು ನೀಡಿದ ಯತೀಶ್

29_01_Mdy_01(Police Protest)
Published on

ಮಂಡ್ಯ: ನಿವೃತ್ತ ಪೊಲೀಸರಿಗೆ ನಗರದ ಹೊರವಲಯದಲ್ಲಿ ನೀಡಬೇಕಿರುವ 27 ಎಕರೆ ನಿವೇಶನಕ್ಕೆ ಸಂಬಂಧಿಸಿದ ವಿವಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಗಳ ತಲುಪಿದೆ.

ನಿವೇಶನಕ್ಕೆ ಒತ್ತಾಯಿಸಿ ಭಾನುವಾರ ಅಮರಾವತಿ ಹೋಟೆಲ್ ಎದುರು ಧರಣಿ ನಡೆಸಿದ ಬೆನ್ನಲ್ಲೇ ಸೋಮವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಎಸ್ಪಿ ಎನ್.ಯತೀಶ್ ಅವರು ಜಿಲ್ಲಾ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರು ಹಾಗೂ ಉದ್ಯಮಿ ಅಮರಾವತಿ ಚಂದ್ರಶೇಖರ್‌ರೊಂದಿಗೆ ಹಲವು ಹೊತ್ತು ಮಾತುಕತೆ ನಡೆಸಿದರು.

ನಿವೇಶನ ಹಂಚಿಕೆ ಸಂಬಂಧ ಈಗಾಗಲೇ ಹಲವು ವರ್ಷ ಕಳೆದಿವೆ. ಆದರೂ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಯಿತು. ಇದಕ್ಕೆ ಸ್ಪಂದಿಸಿರುವ ಚಂದ್ರಶೇಖರ್, ೆ.2ರೊಳಗೆ ನಿವೇಶನ ಹಸ್ತಾಂತರ ಸಂಬಂಧ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಅದಕ್ಕೆ ಸದಸ್ಯರು ಕೂಡ ಒಪ್ಪಿಗೆ ನೀಡಿದ್ದಾರೆ.

ಜ.24ರಂದು ಪತ್ರ ಬರೆದಿದ್ದ ಸದಸ್ಯರು: ನಿವೇಶನ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ಸಂಘದಿಂದ ಜ.24ರಂದು ಚಂದ್ರಶೇಖರ್ ಅವರಿಗೆ ಪತ್ರ ಬರೆಯಲಾಗಿತ್ತು. ಅದರಲ್ಲಿರುವಂತೆ ಪ್ರತಿ ಚದರಡಿಗೆ 350 ರೂನಂತೆ ಗುತ್ತಲು ಹಾಗೂ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್‌ನಲ್ಲಿ 27 ಎಕರೆ ಜಮೀನಿನಲ್ಲಿ ನಿವೇಶನವನ್ನು ಅಭಿವೃದ್ಧಿಪಡಿಸಿ 2021 ನ.30ರಂದು ಹಸ್ತಾಂತರ ಮಾಡಲು ಒಪ್ಪಂದವಾಗಿತ್ತು. ಆದರೆ ಹಲವು ಕಾರಣ ಕೊಟ್ಟು ಹಲವು ಬಾರಿ ಹಸ್ತಾಂತರ ಮುಂದೂಡಲಾಗಿದೆ. ಮಾತ್ರವಲ್ಲದೆ ಇಲ್ಲಸಲ್ಲದ ಸಬೂಬು ಕಾರಣ ಕೊಟ್ಟ ಬೇಜವಾಬ್ದಾರಿತನ ಪ್ರದರ್ಶನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ ಪ್ರಚಲಿತ ವಿದ್ಯಾಮಾನ ಪರಿಶೀಲಿಸಿದಾಗ 27 ಎಕರೆ ಜಮೀನಿನ ಲೇಔಟ್ ಪ್ಲ್ಯಾನ್ ತಯಾರಾಗಿಲ್ಲ. ಸರ್ಕಾರಿ ಕಚೇರಿಯಲ್ಲಿ ಸಂಘಕ್ಕೆ ಹಸ್ತಾಂತರ ಮಾಡಲು ದಾಖಲೆ ನೀಡಿಲ್ಲ. ಪ್ರಶ್ನಿಸಿದಾಗ ಮಾತ್ರ ಕಾಮಗಾರಿ ಮಾಡಿ ಮತ್ತೆ ಸ್ಥಗಿತಗೊಳಿಸಲಾಗುತ್ತಿದೆ. ಲಭ್ಯವಿರುವ ಜಮೀನನ್ನು ನಮ್ಮ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಒಂದೇ ಪ್ಲ್ಯಾನ್ ನೀಡಿರುವುದರಿಂದ ಗೊಂದಲವಾಗುತ್ತಿದೆ. ಲೇಔಟ್ ರಚನೆಗೆ ಅನುಗುಣವಾಗಿ ದಾಖಲೆ ಲಭ್ಯವಿಲ್ಲ. ಆದ್ದರಿಂದ ಪತ್ರ ತಲುಪಿದ ಮೂರು ದಿನದೊಳಗೆ ಶುದ್ಧಕ್ರಯ ಮಾಡಿಕೊಡುವ ದಿನಾಂಕ ಹಾಗೂ ಅಭಿಪ್ರಾಯವನ್ನು ತಿಳಿಸಬೇಕೆಂದು ಸೂಚಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಜ.30ರಂದು ಸದಸ್ಯರು ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net