ಟೋಲ್‌ಗಳಲ್ಲಿ ಪೊಲೀಸರ ಪಹರೆ, ಗಡಿಯಲ್ಲೇ ಪ್ರತಿಭಟನಾಕಾರರ ತಡೆಯಲು ಬಂದೋಬಸ್ತ್

09 Nela Ph 01 Police Bandobasth
Published on

ನೆಲಮಂಗಲ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲ ರೈತ ಮತ್ತು ಕನ್ನಡಪರ ಸಂಘಟನೆಗಳು ಭಾರತ್ ಬಂದ್ ಜತೆಗೆ ಬುಧವಾರ ಕೆಲ ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹೆದ್ದಾರಿ ಟೋಲ್‌ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಬುಧವಾರ ಬೆಳಗ್ಗೆ ತಾಲೂಕಿನ ಯಂಟಗಾನಹಳ್ಳಿ ಬಳಿಯ ರಾ.ಹೆದ್ದಾರಿ 75ರ ಲ್ಯಾಂಕೋದೇವಿಹಳ್ಳಿ ಟೋಲ್ ಬಳಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಪ್ರತಿಭಟನಕಾರರನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ನಿರ್ದೇಶನದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ರಾಜ್ಯರಾಜಧಾನಿ ನಡೆಯುವ ಬಂದ್‌ಗೆ ಮಂಗಳೂರು ಮತ್ತು ಹಾಸನ ಜಿಲ್ಲೆಗಳಿಂದ ರೈತರು ಆಗಮಿಸುವ ನಿರೀಕ್ಷಿಸಿದ್ದ ಪೊಲೀಸ್ ಇಲಾಖೆ, ಟೋಲ್ ಬಳಿಯಲ್ಲಿ ಪ್ರತಿಭಟನಕಾರರನ್ನು ತಡೆದು ಹಿಂದಕ್ಕೆ ಕಳಿಸುವುದು ಮಾತುಕೇಳದಿದ್ದ ಪ್ರತಿಭಟನಾಕಾರರ ಬಂಧನಕ್ಕೆ ಸಿದ್ಧತೆಯೊಂದಿಗೆ ರಸ್ತೆಯಲ್ಲಿ ಬ್ಯಾರಿಗೇಟ್‌ಗಳನ್ನು ಹಾಕಿಕೊಂಡು ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾಲೂಕಿನ ಯಂಟಗಾನಹಳ್ಳಿಯ ಟೋಲ್ ಬಳಿ ಪ್ರತಿಭಟನಾಕಾರರನ್ನು ತಡೆಯಲು 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿನಿಯೋಜಿಸಲಾಗಿತ್ತು. ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಡೆಸುತ್ತಿದ್ದ ಕೆಲ ವಾಹನಗಳನ್ನು ತಡೆದು ತಪಾಸಣೆ ಮಾಡಲಾಯಿತು ಎಂದು ಗ್ರಾಮಾಂತರ ಜಿಲ್ಲಾ ಅಪಾರ ಪೊಲೀಸ್ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್ ತಿಳಿಸಿದರು.

ಯಾವುದೇ ಪ್ರತಿಭಟನಾಕಾರರು ಈ ಮಾರ್ಗದಲ್ಲಿ ಆಗಮಿಸಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net