

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜ.15ರಂದು ಮಧ್ಯಾಹ್ನ 2.30ಕ್ಕೆ ಅಡ್ಯಾರ್ ಶಹಾ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಹಿನ್ನೆಲೆಯಲ್ಲಿ ಮಂಗಳೂರಿನಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಂಗಳವಾರ ಬೆಳಗ್ಗೆ ಪೊಲೀಸ್ ಹಾಗೂ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಜಲಫಿರಂಗಿ ಹಾಗೂ ಗಲಭೆ ನಿಯಂತ್ರಿಸುವ ಇತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ್ದಾರೆ. ಬಂದರು, ಎಂಆರ್‌ಪಿಎಲ್‌ಗಳಿಂದ ಬರುವ ಹಾಗೂ ಅಲ್ಲಿಗೆ ಹೋಗುವ ಟ್ಯಾಂಕರ್, ಘನವಾಹನಗಳ ಸಂಚಾರ ತಡೆಯಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗ್ನಿಶಾಮಕ, ಅಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸಂಖ್ಯೆಯ ತುರ್ತು ವಾಹನಗಳನ್ನು ಕಾರ್ಯಕ್ರಮ ಸ್ಥಳದಲ್ಲಿ ನಿಯೋಜಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
3 ಸಾವಿರಕ್ಕೂ ಅಧಿಕ ಪೊಲೀಸ್: ಹೆಚ್ಚಿನ ಭದ್ರತೆಗಾಗಿ ರಾಜ್ಯದ 7 ಐಜಿಪಿ ವಲಯಗಳಿಂದ ಪೊಲೀಸರನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಎಡಿಜಿಪಿ, ಐಜಿಪಿ, 11 ಎಎಸ್ಪಿ, 40 ಡಿವೈಎಸ್ಪಿ, 80 ಇನ್‌ಸ್ಪೆಕ್ಟರ್, 200 ಪಿ.ಎಸ್.ಐ, ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್, 3 ಅರೆಸೇನಾ ಪಡೆ, 3 ಕೆಎಸ್‌ಆರ್‌ಪಿ ತುಕಡಿ ಹಾಗೂ ಗೃಹರಕ್ಷಕದಳ ಸೇರಿದಂತೆ ಒಟ್ಟು 3 ಸಾವಿರಕ್ಕಿಂತಲೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ ನಗರದ ವಿವಿಧ ಕಡೆ ಪಥ ಸಂಚಲನ ನಡೆಸಿದ್ದಾರೆ ಎಂದು ಡಾ.ಹರ್ಷ ತಿಳಿಸಿದ್ದಾರೆ.
ಬಿ.ಸಿ.ರೋಡ್-ಮಂಗಳೂರು: ವಾಹನ ಸಂಚಾರ ಮಾರ್ಪಾಡು
ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಬಿ.ಸಿ.ರೋಡ್- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮಾರ್ಪಾಡುಗೊಳಿಸಿ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಆದೇಶ ಹೊರಡಿಸಿದ್ದಾರೆ.
* ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ ಮೂಲಕ ಶಿರಾಡಿ ಘಾಟಿಯಲ್ಲಿ ಪ್ರಯಾಣಿಸಬೇಕು.
ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು, ಪಂಪ್‌ವೆಲ್ ಮೂಲಕ ಮಂಗಳೂರು ಪ್ರವೇಶಿಸಬೇಕು.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ನಂತೂರಿನಲ್ಲಿ ತಿರುವು ಪಡೆದು ಪಂಪ್‌ವೆಲ್-ತೊಕ್ಕೊಟ್ಟು-ಕೊಣಾಜೆ-ಬಿ.ಸಿ ರೋಡ್ ಮೂಲಕ ಸಾಗಬೇಕು.
ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ಬರುವ ವಾಹನಗಳು ಪೊಳಲಿ- ಕೈಕಂಬ ಮೂಲಕ ಪ್ರಯಾಣಿಸಬೇಕು.
ಪ್ರತಿಭಟನೆಯ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದೇ ಆಗಿದೆ. ಸಾಯಂಕಾಲ 6 ಗಂಟೆಯೊಳಗೆ ಕಾರ್ಯಕ್ರಮ ಮುಗಿಸಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಸಂಘಟಕರು ಲಿಖಿತವಾಗಿ ನೀಡಿದ್ದಾರೆ.- ಡಾ.ಹರ್ಷ ಪಿ.ಎಸ್, ಪೊಲೀಸ್ ಕಮಿಷನರ್, ಮಂಗಳೂರು