

ಚಿತ್ರದುರ್ಗ: ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ನಿನ್ನೆಯಷ್ಟೇ ಮಠದ ವತಿಯಿಂದ ಮಾಡಿಕೊಂಡಿದ್ದ ಮನವಿ ಹಿನ್ನೆಲೆಯಲ್ಲಿ ಎಸ್ಪಿ ಈ ಭದ್ರತೆ ಒದಗಿಸಿದ್ದಾರೆ.
ಸ್ವಾಮೀಜಿ ಹಾಗೂ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ರಕ್ಷಣೆ ನೀಡಬೇಕು ಎಂದು ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರಲ್ಲಿ ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಪತ್ರ ಮುಖೇನ ನಿನ್ನೆ ಮನವಿ ಮಾಡಿಕೊಂಡಿದ್ದರು. ಸಿದ್ದರಾಮೇಶ್ವರ ಸ್ವಾಮೀಜಿ ಮಾತ್ರವಲ್ಲದೆ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೂ ಕೊಲೆ ಬೆದರಿಕೆಯೊಡ್ಡಲಾಗಿದೆ.
KSP ಆ್ಯಪ್ ಮೂಲಕ ನಮ್ಮ ಕಚೇರಿಗೆ ಕೊಲೆ ಬೆದರಿಕೆ ಬಂದಿದೆ. ಶಾಸಕರು ಹಾಗೂ ಭೋವಿ ಸಮುದಾಯದ ಹಲವರ ಹೆಸರುಗಳು ಪ್ರಸ್ತಾಪ ಆಗಿದ್ದು, ಅವರ ಹತ್ಯೆಗೆ ಸಂಚು ಹೂಡಿದ್ದಾಗಿ ತಿಳಿಸಲಾಗಿದೆ. ನಾಲ್ಕು ಮಂದಿ ಹತ್ಯೆ ಸಂಚು ರೂಪಿಸಿದ್ದಾರೆ, ಅವರ ಹೆಸರು ಕೂಡ ಉಲ್ಲೇಖವಾಗಿದೆ ಎಂಬ ದೂರಿನೊಂದಿಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.