ಪೊಲೀಸರು ಕರೊನಾ ಸಂಕಷ್ಟ ಕಾಲದಲ್ಲಿ ಮುಂಜಾಗ್ರತೆ ವಹಿಸಿ ಕರ್ತವ್ಯ ನಿರ್ವಹಿಸಿ

police
Published on

ಮಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ತುರ್ತು ರಕ್ಷಣೆ, ಸೇವೆ ಪೊಲೀಸರ ಜವಾಬ್ದಾರಿಯಾಗಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸಿ, ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ದ.ಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.

ಏಳು ತಿಂಗಳಿನಿಂದ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಮಂದಿ ಕರೋನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ. ದೈಹಿಕ ವ್ಯಾಯಾಮ, ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಯ್ದುಕೊಂಡು ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದರು.

ಪೊಲೀಸ್ ಆಯುಕ್ತ ವಿಕಾಶ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀ ಪ್ರಸಾದ್, ಕೋಸ್ಟ್ ಗಾರ್ಡ್ ಡಿಐಜಿ ಎಸ್.ಬಿ.ವೆಂಕಟೇಶ್, ಡಿಸಿಪಿ ವಿನಯ ಗಾಂವ್‌ಕರ್, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಮೊದಲಾದವರು ಹುತಾತ್ಮರಿಗೆ ಗೌರವ ಸೂಚಿಸಿ, ಮೌನ ಪ್ರಾರ್ಥನೆಗೈದು ಅವರ ಆತ್ಮಕ್ಕೆ ಶಾಂತಿ ಕೋರಿದರು.

ದೇಶದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯನಿರತರಾಗಿದ್ದಾಗ ಮೃತಪಟ್ಟಿದ್ದಾರೆ. ಈ ಪೈಕಿ 17 ಮಂದಿ ಕರ್ನಾಟಕದವರು. ಮೃತರ ಹೆಸರುಗಳನ್ನು ಲಕ್ಷ್ಮೀ ಪ್ರಸಾದ್ ವಾಚಿಸಿದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಅವರು ಹುತಾತ್ಮ ದಿನದ ಪೆರೇಡ್ ನೇತೃತ್ವ ವಹಿಸಿದ್ದರು.

ಪೊಲೀಸ್ ಹುತಾತ್ಮ ದಿನದ ಹಿನ್ನೆಲೆ: 1959 ಅ.21ರಂದು ಕೇಂದ್ರ ಮೀಸಲು ಪಡೆ ಪೊಲೀಸ್ ಉಪಾಧೀಕ್ಷಕ ಕರಣ್ ಸಿಂಗ್ ನೇತೃತ್ವದಲ್ಲಿ ಭಾರತೀಯ ಪೊಲೀಸರು ಚೀನಾ ಗಡಿ ಪ್ರದೇಶದ 16 ಸಾವಿರ ಅಡಿ ಎತ್ತರದ ದುರ್ಗಮ ಪ್ರದೇಶವಾದ ಹಾಟ್‌ಸ್ಪ್ರಿಂಗ್ಸ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಆ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಚೀನಾ ದೇಶದ ಸೈನಿಕರು ಆಕ್ರಮಣಕ್ಕೆ ಯತ್ನಿಸಿದ್ದರು. ಭಾರತೀಯ ಪೊಲೀಸರು ತಮ್ಮಲ್ಲಿ ಸಾಕಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಲ್ಲದಿದ್ದರೂ ಚೀನಾ ಸೈನಿಕರೊಡನೆ ಕೊನೆಯ ಗುಂಡು ಹಾಗೂ ಉಸಿರಿರುವ ತನಕ ಹೋರಾಡಿ 10 ಮಂದಿ ಪ್ರಾಣ ಕಳೆದುಕೊಂಡು 9 ಮಂದಿ ಸೆರೆ ಹಿಡಿಯಲ್ಪಟ್ಟಿದ್ದರು. ಈ ಧೀರ ಪೊಲೀಸರ ಸ್ಮರಣಾರ್ಥ ಲಡಾಖ್‌ನ ಅಕ್ಷಾಯಿ ಚೈನಾ ಪ್ರದೇಶದಲ್ಲಿರುವ ಹಾಟ್‌ಸ್ಪ್ರಿಂಗ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಅ.21ರಂದು ದೇಶದಾದ್ಯಂತ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net