

ಹುಬ್ಬಳ್ಳಿ: ತಮ್ಮ ಕುಟುಂಬದ ಕಡೆ ಬಹಳಷ್ಟು ಲಕ್ಷ್ಯ ಕೊಡದೇ ಸಮಾಜಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸಬೇಕು. ನಿತ್ಯವೂ ಪೊಲೀಸರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹಳಷ್ಟು ಮುಖ್ಯವಾದುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಕಾರವಾರ ರಸ್ತೆಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪೊಲೀಸರ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸರು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು, ವಾಹನ ದಟ್ಟಣೆ, ಭಯೋತ್ಪಾದಕ ಕೃತ್ಯ, ಸೈಬರ್ ಸೇರಿ ವಿವಿಧ ಅಪರಾಧ ತಡೆಯುತ್ತಿದ್ದಾರೆ. ನಾಗರೀಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ಅಪರಾಧ ಪ್ರಮಾಣ ಕಡಿಮೆ ಮಾಡಬಹುದು. ಪೊಲೀಸರ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, 1959ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್ಐ ಕರಂ ಸಿಂಗ್ ನೇತೃತ್ವದ ತಂಡ ಕೇವಲ ರೈಫಲ್ನೊಂದಿಗೆ ಲಡಾಖ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತಾ›ಸ್ತ›ಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು. ಇವರ ಪ್ರಾಣ ತ್ಯಾಗದ ನೆನಪಿನಲ್ಲಿ ರಾಷ್ಟ್ರಾದ್ಯಂತ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಣತ್ಯಾಗ ಮಾಡಿದ ಕರ್ತವ್ಯನಿರತ ಪೊಲೀಸರನ್ನು, ಸಿಬ್ಬಂದಿಯನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗುತ್ತದೆ. ಲಡಾಖ್ ನಲ್ಲಿ 16 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ ನಿರ್ವಿುಸಲಾಗಿದೆ. ಈ ವರ್ಷ ದೇಶದಲ್ಲಿ 189 ಪೊಲೀಸರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ 16 ಪೊಲೀಸರು ಕರ್ತವ್ಯದಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರ ತ್ಯಾಗವನ್ನು ಸ್ಮರಿಸುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ ಎಂದರು.
ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಪೊಲೀಸ್ ತುಕಡಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಮರ್ಪಿಸಲಾಯಿತು.
ಆಂತರಿಕ ಭದ್ರತಾ ವಿಭಾಗದ ಐಜಿ ವಿಪುಲಕುಮಾರ, ಡಿಸಿಪಿಗಳಾದ ರವೀಶ್ ಸಿ.ಆರ್., ರಾಜೀವ್ ಎಂ., ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಉದ್ಯಮಿಗಳಾದ ಡಾ. ವಿ.ಎಸ್.ವಿ. ಪ್ರಸಾದ್, ಮಹೇಂದ್ರ ಸಿಂಘಿ, ಮಾಜಿ ಮೇಯರ್ ಡಿ.ಕೆ. ಚವ್ಹಾಣ ಇತರರು ಇದ್ದರು.