

ಮಂಗಳೂರು: ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಅಗಲ ಕಿರಿದಾಗಿದೆ. ಪಾರ್ಕಿಂಗ್‌ಗೆ ಮೀಸಲಿಟ್ಟ ಕಟ್ಟಡಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ. ಈ ಸಮಸ್ಯೆ ಪರಿಹಾರವಾಗದ ಹೊರತು ಸಂಚಾರ ವ್ಯವಸ್ಥೆ ಶಾಶ್ವತ ಪರಿಹಾರ ಅಸಾಧ್ಯ ಎಂದು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಮಾತನಾಡಿದರು.
ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಮಹಾನಗರಪಾಲಿಕೆ ಅನುಮತಿ ನೀಡುತ್ತದೆ. ಪೊಲೀಸ್ ಇಲಾಖೆಯಿಂದ ನಿರಕ್ಷೇಪನಾ ಪತ್ರ ಪಡೆಯುವುದಿಲ್ಲ. ನಿಯಮ ಪಾಲನೆ ಮಾಡಿದ್ದಾರೆಯೇ ಎಂಬುದನ್ನು ಪಾಲಿಕೆ ಅಧಿಕಾರಿಗಳೇ ಗಮನಿಸಬೇಕು ಎಂದ ಅವರು ಅಡ್ಡಾದಿಡ್ಡಿ ಪಾರ್ಕಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಲಾಗುವುದು ಎಂದರು.
ಹೊರ ರಾಜ್ಯ, ಜಿಲ್ಲೆಯಿಂದ ಬಂದ ನಿರಾಶ್ರಿತರು ಸ್ಮಾರ್ಟ್‌ಸಿಟಿಯ ಅಂದವನ್ನು ಕೆಡಿಸುತ್ತಿದ್ದಾರೆ. ಅಪರಾಧ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರಿಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಹೇಳಿದರು.
ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದೆ. ಮತ್ತೆ ಫಾಲೋಅಪ್ ಮಾಡಲಾಗುವುದು. ಪೊಲೀಸ್ ಇಲಾಖೆಯಿಂದ ಗಸ್ತು ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಪ್ರತಿಕ್ರಿಯಿಸಿದರು.
ಹಂಪನಕಟ್ಟೆಯಲ್ಲಿ ಖಾಸಗಿ ಬಸ್‌ಗಳ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಚಾರ ಪೊಲೀಸರು ಗಮನ ವಹಿಸಬೇಕು ಎಂದು ಅತ್ತಾವರದಿಂದ ಕರೆ ಮಾಡಿದ ಸಾರ್ವಜನಿಕರೊಬ್ಬರು ಹೇಳಿದರು. ಸೋಮವಾರದಿಂದ ಸಂಚಾರ ಪೊಲೀಸರನ್ನು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದರು.
ಮೂಡುಬಿದಿರೆಯಲ್ಲಿ ಆಟೋರಿಕ್ಷಾ ಚಾಲಕರು ಮೀಟರ್ ಹಾಕದೆ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೆ ಕಾಣುವಂತೆ ದರಪಟ್ಟಿ ಹಾಕಬೇಕು ಎಂದು ಬಾಲಕೃಷ್ಣ ಎಂಬವರು ಮನವಿ ಮಾಡಿದರು. ಆರ್‌ಟಿಒ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದ ಎಂದು ಆಯುಕ್ತರು ಹೇಳಿದರು.