ರೌಡಿಶೀಟರ್ ಸಂಖ್ಯೆಗೆ ತಕ್ಕಂತೆ ಇಲ್ಲ ಪೊಲೀಸ್ ಸಿಬ್ಬಂದಿ

h2-roudy
Published on

ಹುಬ್ಬಳ್ಳಿ: ರೌಡಿಶೀಟರ್​ಗಳಿಗೆ ಸರಿಸಮವಾಗಿ ಪೊಲೀಸ್ ಸಿಬ್ಬಂದಿ ಇಲ್ಲ. ಗಣೇಶ ಚತುರ್ಥಿ ನಂತರ ಹಂತ ಹಂತವಾಗಿ ಸನ್ನಡತೆ, ಅನಾರೋಗ್ಯ ಸೇರಿ ವಿವಿಧ ಮಾರ್ಗಸೂಚಿ ಅನುಸರಿಸಿ ರೌಡಿಶೀಟರ್ ಪಟ್ಟಿಯಿಂದ ಕೆಲವರನ್ನು ವಿಮುಕ್ತಿಗೊಳಿಸಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಆಯುಕ್ತಾಲಯ ವ್ಯಾಪ್ತಿಯಲ್ಲಿ 1,700ಕ್ಕೂ ಹೆಚ್ಚು ರೌಡಿಶೀಟರ್​ಗಳು ಇದ್ದಾರೆ. ಇವರಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯೇ ಇಲ್ಲ. ಬೆಂಗಳೂರಿನಲ್ಲಿ ಈ ಹಿಂದೆ ಒಬ್ಬ ರೌಡಿಶೀಟರ್​ಗೆ ಒಬ್ಬ ಸಿಬ್ಬಂದಿಯಂತಿದ್ದರು. ಮೊದಲು ಸ್ವಲ್ಪ ಪ್ರಮಾಣದಲ್ಲಿ ರೌಡಿಶೀಟರ್​ಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತಿತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿಯೂ ತೆಗೆದು ಹಾಕಬಹುದು ಎಂಬುದಿದೆ ಎಂದರು.

ಈಗಾಗಲೇ ಎಲ್ಲ ಠಾಣೆಗಳ ವ್ಯಾಪ್ತಿಯಿಂದ ಮಾಹಿತಿ ಕಲೆ ಹಾಕಲಾಗಿದೆ. ಉತ್ತಮ ನಡವಳಿಕೆ, ಮುಖ್ಯವಾಹಿನಿಯಲ್ಲಿ ಬದುಕಲು ಇಷ್ಟಪಟ್ಟವರು, 10 ವರ್ಷಗಳ ಕಾಲ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದವರು, ಅನಾರೋಗ್ಯ ಸೇರಿ ವಿವಿಧ ಕಾರಣಗಳನ್ನು ಕೆಲವರು ಕೊಟ್ಟಿದ್ದಾರೆ. ಪರಿಶೀಲನೆ ಮಾಡಲಾಗುತ್ತಿದೆ. ಹಬ್ಬದ ನಂತರ ರೌಡಿಶೀಟರ್ ಪಟ್ಟಿ ಕ್ಲೋಸ್ ಮಾಡಲಾಗುವುದು ಎಂದು ತಿಳಿಸಿದರು.

ರೌಡಿಶೀಟರ್​ಗಳಲ್ಲಿ ಎ, ಬಿ ಮತ್ತು ಸಿ ವಿಭಾಗಗಳಿವೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದವರನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಎಸಿಪಿ ಹಂತದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಗಡಿಪಾರು, ಗೂಂಡಾ ಆಕ್ಟ್ ಕೇಸ್ ದಾಖಲು ಮಾಡಲು ಕೂಡ ಆಗಾಗ ಸೂಚನೆ ನೀಡಲಾಗುತ್ತಿರುತ್ತದೆ. ಅವರ ಸಹಚರರ ಹೆಸರು, ಫೋನ್ ನಂಬರ್, ವಾಹನ ಪೂರೈಕೆ ಮಾಡುವವರು ಸೇರಿ ಎಲ್ಲ ರೀತಿಯ ಮಾಹಿತಿಯನ್ನು ರೌಡಿಶೀಟರ್ ಪಟ್ಟಿಯಲ್ಲಿ ಅವರ ಜತೆಗೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಪೊಲೀಸ್ ಮ್ಯಾನುವಲ್​ನಲ್ಲಿ ಇವೆಲ್ಲ ಸ್ಪಷ್ಟವಾಗಿವೆ ಎಂದು ಹೇಳಿದರು.

ಮಾರ್ಗದರ್ಶನ: ಸೆ. 6 ಮತ್ತು 7ರಂದು ಗೌರಿ ಮತ್ತು ಗಣೇಶ ಹಬ್ಬವಿದೆ. 16ರಂದು ಈದ್ ಮಿಲಾದ್ ಆಚರಣೆ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ವಿವಿಧ ಸಭೆಗಳನ್ನು ಮಾಡಲಾಗಿದೆ. ಶಾಂತಿಯುತವಾಗಿ ಹಬ್ಬ ಆಚರಿಸುವ ಸಂಬಂಧ ಎಲ್ಲ ರೀತಿಯ ಮಾರ್ಗದರ್ಶನವನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ನೀಡಿದೆ ಎಂದರು.

ರೌಡಿಶೀಟರ್​ಗಳ ಪರೇಡ್: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಶಾಂತಿ, ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರೌಡಿಶೀಟರ್​ಗಳ ಪರೇಡ್ ನಡೆಯಿತು.

ಒಟ್ಟು 862 ರೌಡಿಶೀಟರ್​ಗಳು ಪರೇಡ್​ನಲ್ಲಿ ಹಾಜರಾಗಿದ್ದರು. 8 ರೌಡಿಶೀಟರ್​ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. 295 ರೌಡಿಶೀಟರ್​ಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. 15 ರೌಡಿಶೀಟರ್​ಗಳ ಮೇಲೆ ವಾರಂಟ್ ಇದೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ. ರೌಡಿ ಚಟುವಟಿಕೆ ಬಿಟ್ಟು ಮುಖ್ಯ ವಾಹಿನಿಗೆ ಬಂದು ಸುಧಾರಣೆ ಆಗುತ್ತೇವೆಂದು ಮನವಿ ಮಾಡಿದವರ ಬಗ್ಗೆ ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net