

ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ತಾರಕಕ್ಕೇ ಏರುತ್ತಿದಂತೆ ಶಾಂತಿಯುತ ಮತದಾನಕ್ಕಾಗಿ ಪೊಲೀಸರು ಸೋಮವಾರ ಹಲವೆಡೆ ಪಥ ಸಂಚಲನ ನಡೆಸಿದರು. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ನೇತೃತ್ವದಲ್ಲಿ ನಂದಿನಿ ಲೇಔಟ್‌ನಲ್ಲಿ ಪಥ ಸಂಚಲನ ನಡೆಯಿತು. ಸ್ಥಳೀಯ ಪೂಲೀಸರ ಜತೆಗೆ ಸಿಐಎಸ್ಎಸ್ಎಸ್ , ಕೆಎಸ್‌ಆರ್‌ಪಿ ಮತ್ತು ಸಿಎಆರ್ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಲಕ್ಷ್ಮಿದೇವಿನಗರ ಬಸ್ ನಿಲ್ದಾಣ, ಕೂಲಿ ನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಪಥ ಸಂಚಲನ ನಡೆಯಿತು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉತ್ತರ ವಿಭಾಗದ 8 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮತದಾನ ನಡೆಯಲಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಉತ್ತರ ವಿಭಾಗದ ಪೊಲೀಸ್ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಭಾನುವಾರ ಸಿಐಎಸ್‌ಎಸ್ 1 ಕಂಪನಿ ಉತ್ತರ ವಿಭಾಗಕ್ಕೆ ಬಂದಿದೆ. ಮತ್ತೊಂದು ಕಂಪನಿ ಬರಲಿದೆ. ಸ್ಥಳೀಯ ಪೊಲೀಸರ ಜತೆಗೆ ಹೆಚ್ಚುವರಿಯಾಗಿ 10 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 36 ಪಿಎಸ್‌ಐ, 200 ಪೇದೆಗಳು ಮತ್ತು ಮುಖ್ಯಪೇದೆಗಳು, 4 ಕೆಎಸ್‌ಆರ್‌ಪಿ ಮತ್ತು 3 ಸಿಎಆರ್ ತುಕಡಿಗಳನ್ನು ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.