

ವಿಜಯಪುರ: ಕೊಲೆ ಪ್ರಕರಣವೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಸಿದ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿ ಆಧರಿಸಿ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 10 ಕಂಟ್ರಿ ಪಿಸ್ತೂಲ್ ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ಅದರಲ್ಲಿ ಓರ್ವ ಆರೋಪಿ ಅಕ್ರಮ ಶಸ್ತ್ರಾಸ್ತ್ರ ಪೂರೈಸುವ ದಂಧೆಯಲ್ಲಿ ತೊಡಗಿದ್ದು, ವಿಚಾರಣೆ ವೇಳೆ ಈವರೆಗೆ ನೀಡಿದ ಕಂಟ್ರಿ ಪಿಸ್ತೂಲ್‌ಗಳ ವಿವರ ನೀಡಿದ್ದನು. ಅದನ್ನಾಧರಿಸಿ ಪೊಲೀಸರು ವಿಶೇಷ ತಂಡ ಕಟ್ಟಿಕೊಂಡು ಕಾರ್ಯಾಚರಣೆಗಿಳಿದಿದ್ದರು. ಒಟ್ಟು 10 ಜನರನ್ನು ಬಂಧಿಸಿದ್ದಾರೆ.
ಹಂಚಿನಾಳ ತಾಂಡಾದ ನಿವಾಸಿ ಪ್ರಕಾಶ ಮರ್ಕಿ ರಾಠೋಡ, ಕರಾಡ ದೊಡ್ಡಿಯ ಅಶೋಕ ಪರಮು ಪಾಂಡ್ರೆ, ತುಳಜಾಪುರ ನಿವಾಸಿ ಸುಜಿತ ಸುಭಾಸ ರಾಠೋಡ, ವಿಜಯಪುರ ನಗರದ ಸಾಯಿ ಪಾರ್ಕ್‌ನ ನಿವಾಸಿ ಸುಖದೇವ ಊರ್ಫ್ ಸುಖಿ ನರಸು ರಾಠೋಡ, ಸಿಂದಗಿಯ ನಾಗಾವಿ ತಾಂಡಾದ ನಿವಾಸಿ ಪ್ರಕಾಶ ಭೀಮಸಿಂಗ್ ರಾಠೋಡ, ಬಸವನಬಾಗೇವಾಡಿಯ ಗಣೇಶ ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ನಿವಾಸಿ ಚನ್ನಪ್ಪಾ ಮಲ್ಲಪ್ಪ ನಾಗನೂರ, ತಿಕೋಟಾ ತಾಲೂಕಿನ ಲೋಹಗಾಂವ ತಾಂಡಾ ನಿವಾಸಿ ಸಂತೋಷ ಕಿಶನ್ ರಾಠೋಡ, ಸಾಂಗಲಿ ಜಿಲ್ಲೆಯ ಐತೆವಾಡಿ ನಿವಾಸಿ ಜನಾರ್ಧನ ವಸಂತ ಪವಾರ ಹಾಗೂ ಹಂಚನಾಳ ಎಲ್ಟಿ ನಂ. 1 ರ ನಿವಾಸಿ ಸಾಗರ ಊರ್ಫ್ ಸುರೇಶ ರಾಠೋಡ ಬಂಧಿತ ಆರೋಪಿಗಳು.
ಅರಕೇರಿ ಎಲ್‌ಟಿ ನಂ. 1 ರ ನಿವಾಸಿ ರಮೇಶ ಗೇಮು ಲಮಾಣಿ ಈತನ ಮಗಳನ್ನು ಈ ಹಿಂದೆ ಅದೇ ಗ್ರಾಮದ ನಿವಾಸಿ ಸತೀಶ ಪ್ರೇಮಸಿಂಗ ರಾಠೋಡ ಈತನಿಗೆ ಮದುವೆ ಮಾಡಿ ಕೊಡಲು ಕೇಳಿದ್ದರು. ಅದಕ್ಕೆ ರಮೇಶ ಲಮಾಣಿ ಒಪ್ಪದ ಕಾರಣ ಆತನ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಾವಿಗೆ ಸತೀಶನೇ ಕಾರಣ ಎಂದು ಸಿಟ್ಟಾಗಿ ಜ. 28 ರಂದು ಬೆಳಗ್ಗೆ 10.30 ರ ಸುಮಾರಿಗೆ ರಮೇಶ ಗೇಮು ಲಮಾಣಿ ಹಾಗೂ ಇತರರು ಸೇರಿ ಸತೀಶ ಪ್ರೇಮಸಿಂಗ ರಾಠೋಡ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ 5ನೇ ಆರೋಪಿತಯಾಗಿದ್ದ ಸಾಗರ ಸುರೇಶ ರಾಠೋಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ ಗೇಮು ಲಮಾಣಿಗೆ ಕೊಲೆ ಮಾಡಲು ಅಕ್ರಮ ಪಿಸ್ತೂಲ್ ಪೂರೈಸಿದ್ದನು. ಇದೇ ರೀತಿ ಈತ ಇನ್ನೂ ಅನೇಕ ಕಡೆ ಪಿಸ್ತೂಲ್ ಪೂರೈಸಿರುವುದು ತಿಳಿದು ಬಂದಿತ್ತು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್‌ಪಿ ಶಂಕರ ಮಾರಿಹಾಳ ಹಾಗೂ ಎಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಅಕ್ರಮ ಪಿಸ್ತೂಲ್‌ಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಡಿವೈಎಸ್‌ಪಿಗಳಾದ ಬಸವರಾಜ ಯಲಿಗಾರ, ಗಿರಿಮಲ್ಲ ತಳಕಟ್ಟಿ, ಜಗದೀಶ ಎಚ್. ಎಸ್, ಸಿಪಿಐಗಳಾದ ಬಲ್ಲಪ್ಪ ನಂದಗಾವಿ, ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ, ನಾನಾಗೌಡ ಪಾಟೀಲ, ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ ಹಾಗೂ ಪಿಎಸ್‌ಐಗಳಾದ ವಿನೋದ ದೊಡಮನಿ, ಎನ್.ಎ. ಉಪ್ಪಾರ, ಶ್ರೀಕಾಂತ ಕಾಂಬಳೆ, ಆರೀಫ್ ಮುಶಾಪುರಿ, ದೇವರಾಜ ಉಳ್ಳಾಗಡ್ಡಿ, ಸೀತಾರಾಮ ಲಮಾಣಿ, ಬಿ.ಎಂ. ಸಂಗಾಪುರ, ಎಂ.ಡಿ. ಘೋರಿ, ಬಿ.ಎ. ತಿಪ್ಪರೆಡ್ಡಿ ಹಾಗೂ ಸಿಬ್ಬಂದಿ ಎಂ.ಎನ್. ಮುಜಾವರ, ಬಿ.ವಿ. ಪವಾರ, ಎಚ್.ಡಿ. ಗೊಳಸಂಗಿ, ಎಲ್.ಎಸ್. ಹಿರೇಗೌಡರ, ಎ.ಎ. ಪಟ್ಟಣಶೆಟ್ಟಿ, ಐ.ಐ. ದಳವಾಯಿ, ಎ.ಎಸ್. ಬಿರಾದಾರ, ಆರ್.ಪಿ. ಗಡೆದ, ಎಸ್.ಎಚ್. ನಾಯಕ, ಎಸ್.ಬಿ. ರಾಠೋಡ, ಕೆ.ಎಸ್.ಬಿರಾದಾರ, ಎಸ್.ಪಿ. ಲಮಾಣಿ ತಂಡದಲ್ಲಿದ್ದರು.
ಚುರುಕಿನ ಕಾರ್ಯಾಚರಣೆ ನಡೆಸಿ ಕಂಟ್ರಿ ಪಿಸ್ತೂಲ್ ಪತ್ತೆ ಹಚ್ಚಿದ ತಂಡದ ಕಾರ್ಯವನ್ನು ಎಸ್‌ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.