ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು

Car
Published on

ಮಂಗಳೂರು: ಆರೋಪಿಗಳಿಗೆ ಸೇರಿದ ಐಷಾರಾಮಿ ಕಾರು ಮಾರಾಟ ಪ್ರಕರಣದ ಸಿಐಡಿ ತನಿಖೆ ಆರಂಭವಾಗುತ್ತಿದ್ದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಮಾನತು ಮಾಡಿದ್ದಾರೆ.

ಸಿಸಿಬಿ ಪಿಎಸ್‌ಐ ಆಗಿದ್ದು, ಪ್ರಸ್ತುತ ಚಿಕ್ಕಮಗಳೂರಿನಲ್ಲಿ ಕರ್ತವ್ಯದಲ್ಲಿರುವ ಕಬ್ಬಾಳ್‌ರಾಜ್ ಹಾಗೂ ಇಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡವರು. ಮಂಗಳೂರು ಸಿಸಿಬಿ ಸಿಬ್ಬಂದಿ ಅಶಿತ್ ಡಿಸೋಜ, ರಾಜಾ ಎಂಬುವರ ಮೇಲೂ ನಗರ ಪೊಲೀಸ್ ಕಮಿಷನರ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಬ್ಬಾಳ್‌ರಾಜ್‌ರನ್ನು ಸಿಐಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಡಿಸಿಪಿ ವಿನಯ ಗಾಂವ್ಕರ್ ಸಲ್ಲಿಸಿದ ವಿಚಾರಣಾ ವರದಿಯಲ್ಲಿ ಇನ್‌ಸ್ಪೆಕ್ಟರ್ ರಾಮಕೃಷ್ಣ ಹೆಸರು ಉಲ್ಲೇಖ ಇರಲಿಲ್ಲ ಎನ್ನಲಾಗಿದೆ. ಡೀಲ್‌ನಲ್ಲಿ ರಾಮಕೃಷ್ಣ ಭಾಗಿಯಾಗದಿದ್ದರೂ ಪ್ರಕರಣ ಅವರ ಠಾಣೆಯಲ್ಲಿ ದಾಖಲಾಗಿತ್ತು. ಬಿಗು ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಅವರನ್ನೂ ಅಮಾನತು ಮಾಡುವಂತೆ ಸಿಐಡಿ ತಂಡ ಶಿಫಾರಸು ಮಾಡಿತ್ತು ಎಂಬ ಮಾಹಿತಿ ಲಭಿಸಿದೆ.

20 ಮಂದಿಗೆ ನೋಟಿಸ್: ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಕಬ್ಬಾಳ್‌ರಾಜ್, ರಾಮಕೃಷ್ಣ, ಇಬ್ಬರು ಸಿಬ್ಬಂದಿ ಸಹಿತ ಸುಮಾರು 20 ಮಂದಿಗೆ ಸಿಐಡಿ ತನಿಖಾ ತಂಡ ನೋಟಿಸ್ ಜಾರಿಗೊಳಿಸಿದೆ. ಈ ಹಿಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಪಾತ್ರ ಇದರಲ್ಲಿ ಇಲ್ಲದಿದ್ದರೂ ಅವರಿಗೂ ವಿಚಾರಣೆ ಸಲುವಾಗಿ ನೋಟಿಸ್ ನೀಡಲಾಗಿದೆ. ಅಲ್ಲದೆ ಕಾರು ವಹಿವಾಟು ನಡೆಸಿದವರು, ದೂರುದಾರರು, ಆರ್‌ಟಿಒ ಅಧಿಕಾರಿ ಮತ್ತು ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂ. ವಂಚಿಸಿದ್ದ ಎಲಿಯ ಕನ್‌ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲ್ಯು, ಪೋರ್ಷೆ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂಬುದು ಆರೋಪ. ಪೋರ್ಷೆ ಹಾಗೂ ಬಿಎಂಡಬ್ಲ್ಯು ಕಾರನ್ನು ಸ್ವಂತಕ್ಕೆ ಬಳಸಿಕೊಂಡಿರುವುದನ್ನು ವಿಚಾರಣಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net