

ಮಂಡ್ಯ: ಸಮಾಜದ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡಿ ಹುತಾತ್ಮರಾಗುವ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೊಲೀಸರು ದಿನವಿಡೀ ಬಿಸಿಲು, ಮಳೆ, ಗಾಳಿ, ಹಬ್ಬ ಹರಿದಿನ ಮರೆತು ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದರಿಂದ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಪೊಲೀಸರು ಒಂದು ರೀತಿಯ ತ್ಯಾಗಮಯ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಅವರ ಕುಟುಂಬವೂ ಸಹ ಬೆನ್ನೆಲುಬಾಗಿ ನಿಂತಿದೆ. ನಮ್ಮ ನೆಮ್ಮದಿಗಾಗಿ ಹುತಾತ್ಮರಾದ ಪೊಲೀಸರನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡಿದೆ ದಿನವೂ ಸ್ಮರಿಸಬೇಕು. ಕಳೆದ ಹದಿನೆಂಟು ವರ್ಷದಿಂದ ನಾನು ಕರ್ತವ್ಯದಲ್ಲಿ ಪೊಲೀಸರೊಂದಿಗೆ ಭಾಗಿಯಾಗಿದ್ದೇನೆ. ನಮ್ಮ ಕುಟುಂಬಕ್ಕಿಂತ ಹೆಚ್ಚು ಕಾಲ ಪೊಲೀಸರೊಂದಿಗೆ ಕೋರ್ಟ್ನಲ್ಲಿ ಕಾಲ ಕಳೆದಿದ್ದೇನೆ. ಎಲ್ಲ ಇಲಾಖೆಗಳಿಗಿಂತ ಹೆಚ್ಚು ಶ್ರಮವಹಿಸಿ ಕರ್ತವ್ಯ ನಿಷ್ಠೆಯನ್ನು ಪೊಲೀಸರು ಮೆರೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಇತರರಿದ್ದರು.