

ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣೆ ವತಿಯಿಂದ ಗಣೇಶೋತ್ಸವದ ಪೂರ್ವಭಾವಿಯಾಗಿ ಗಣೇಶೋತ್ಸವ ಸಮಿತಿಯ ಪ್ರಮುಖರ ಶಾಂತಿ ಸಭೆ ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಗಂಗೊಳ್ಳಿ ಠಾಣೆ ಉಪನಿರೀಕ್ಷಕ ಪವನ್ ನಾಯಕ್, ಇಲಾಖೆಗೆ ಯಾವುದೇ ದೂರು ಬಾರದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರ, ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯ ವಾರ್ಗಸೂಚಿಯಂತೆ ನಡೆಸಬೇಕು. ವಿವಿಧ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು. ಪ್ರತಿಷ್ಠಾಪನೆಯಿಂದ ವಿಸರ್ಜನೆ ತನಕ ಏನೇನು ಸಮಸ್ಯೆಗಳು ಬರಬಹುದೆಂದು ಪೂರ್ವಾವಲೋಕನ ವಾಡಿಕೊಂಡು ಬಗೆಹರಿಸಿಕೊಳ್ಳಬೇಕು ಎಂದರು.
ಗಂಗೊಳ್ಳಿ ಠಾಣೆ ಉಪನಿರೀಕ್ಷಕ (ತನಿಖೆ) ಬಸವರಾಜ್ ಕನಶೆಟ್ಟಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಗಣೇಶೋತ್ಸವ ನಡೆಸಲು ಸ್ಥಳೀಯಾಡಳಿತದಿಂದ ಅನುಮತಿ ಪಡೆಯಬೇಕು. ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ ಸ್ವಯಂಸೇವಕರನ್ನು ನಿಯೋಜಿಸಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.