

ರಾಯಚೂರು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಡಿಎಆರ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ತುರ್ತು ಸಂದರ್ಭದಲ್ಲಿ ಸಿದ್ಧಾರಾಗುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರಾಣ ತ್ಯಾಗವನ್ನು ನಾವೆಲ್ಲರೂ ಸ್ಮರಿಸಬೇಕು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ದೇಶದ ಏಳಿಗೆಗೆ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ ಭದ್ರ ಬುನಾದಿ ಇದ್ದಂತೆ. ಇಂತಹ ಕೆಲಸವನ್ನು ಕೈಗೊಳ್ಳುವ ವೇಳೆ ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡುವ ಪೊಲೀಸ್ ಸಿಬ್ಬಂದಿ ಬಗ್ಗೆ ಸಮಾಜ ಹೆಮ್ಮೆ ಪಡಬೇಕು ಎಂದರು.
ರಾಯಚೂರು ಜಿಲ್ಲೆಯು ಶಾಂತಿ ಸೌಹಾರ್ತಗೆ ಹೆಸರಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಬೇರೆ ಬೇರೆ ರಂಗಗಳಲ್ಲಿ ಪ್ರಗತಿಯಾಗುತ್ತಿದೆ. ಕೆಕೆಆರ್‌ಡಿಬಿ ಅನುದಾನ ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡಿರುವ ಸೇವೆ ಸ್ಮರಣೀಯವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾತನಾಡಿ, 2025ರಲ್ಲಿ ರಾಷ್ಟ್ರಮಟ್ಟದಲ್ಲಿ ಕಾನೂನುಶಾಂತಿ ಪಾಲನೆಯ ಹೋರಾಟದಲ್ಲಿ 191 ಪೊಲೀಸರು ಹಾಗೂ ಕರ್ನಾಟಕದಲ್ಲಿ 9 ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸೇವೆ ಸ್ಮರಿಸೋಣ ಎಂದರು.
ನಂತರ ಜಿಲ್ಲಾ ಪೊಲೀಸ್ ಮುಖ್ಯಾಲಯದ ಆವರಣದಲ್ಲಿ ನಡೆದ ಹುತಾತ್ಮರ ಸ್ಮಾರಕದ ಬಳಿಯಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿ.ಹರೀಶ್ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಶಸ್ತ್ರಪಡೆಯ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಪೊಲೀಸ್ ಧ್ವಜ ಅರ್ಧಕ್ಕೆ ಇಳಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಿ, ಪ್ರಮುಖರಾದ ಅಶೋಕ ಕುಮಾರ ಜೈನ್, ಚಮರಸ್ ಮಾಲೀ ಪಾಟೀಲ್,ಕೆ.ಇ.ಕುಮಾರ,ರವೀಂದ್ರ ಜಲ್ದಾರ್ ಸೇರಿದಂತೆ ಅನೇಕರು ಇದ್ದರು.