

ಮಂಡ್ಯ: ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯಯುತವಾಗಿದ್ದರೆ ಮಾತ್ರ ಸಮಾಜದ ರಕ್ಷಣೆ ಮಾಡುವುದಕ್ಕೆ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಬೃಂಗೇಶ್ ತಿಳಿಸಿದರು.
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ವೈಯಕ್ತಿಕ ಸುಖ, ದುಃಖ ಅದರಲ್ಲೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಹುಟ್ಟಿದ ಮೇಲೆ ಸಾಯುವುದು ಪ್ರಕೃತಿ ನಿಯಮ. ಆದರೆ ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುವುದು ಬಹಳ ಮುಖ್ಯ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ನಿಜಕ್ಕೂ ಪುಣ್ಯದ ಮತ್ತು ಗೌರವಯುತವಾದ ಕೆಲಸ. ದೇಶಕ್ಕಾಗಿ ಪ್ರಾಣ ಅರ್ಪಿಸಿದವರಿಗೆ ಅಂತಿಮ ದರ್ಶನದ ಸಂದರ್ಭದಲ್ಲಿ ಮೃತ ದೇಹದ ಮೇಲೆ ರಾಷ್ಟ್ರ ಧ್ವಜ ಇಟ್ಟು ಗೌರವ ಸಮರ್ಪಣೆ ಮಾಡುತ್ತಾರೆ. ಅದಕ್ಕಿಂತ ಬಹುದೊಡ್ಡ ಗೌರವ ಮತ್ತೊಬ್ಬ ವ್ಯಕ್ತಿಗೆ ಸಿಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿ ಮಡಿದ ಪ್ರತಿಯೊಬ್ಬ ಪೊಲೀಸರು ಹಾಗೂ ಸೈನಿಕರು ಕೂಡ ಪುಣ್ಯವಂತರು. ಅವರ ಬದುಕು ಹಾಗೂ ಸಾವು ಎರಡು ಕೂಡ ಸಾರ್ಥಕವಾದದ್ದು. ಈ ವರ್ಷ 213 ಪೊಲೀಸರು ಹುತಾತ್ಮರಾಗಿದ್ದಾರೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸಮಾಜದ ಸ್ವಾಸ್ಥೃ ಕಾಪಾಡುವುದಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡಿರುತ್ತಾರೆ ಎಂದರು.
ಸೈನಿಕ, ಶಿಕ್ಷಕ, ಕೃಷಿಕ, ಆರಕ್ಷಕ ಸಮಾಜದ ಆಧಾರಸ್ತಂಭ. ಸೈನಿಕರು ದೇಶದ ಗಡಿಯಲ್ಲಿ ನಿಂತುಕೊಂಡು ನಮಗೆಲ್ಲ ರಕ್ಷಣೆ ಕೊಟ್ಟರೆ, ದೇಶದ ಒಳಗಡೆ ಇದ್ದು ದೇಶದ ರಕ್ಷಣೆ ಮಾಡುತ್ತಿರುವವರೇ ಆರಕ್ಷಕ ಸಿಬ್ಬಂದಿ. ಇಂತಹ ಆರಕ್ಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇಲಾಖೆ ಸಿಬ್ಬಂದಿ ಸಮಯದ ಪರಿವೇ ಇಲ್ಲದೆ ಗಾಳಿ, ಮಳೆ ಬಿಸಿಲು ಎನ್ನದೇ ಸೇವೆ ಸಲ್ಲಿಸುತ್ತಾರೆ. ಸೇವೆ ಸಲ್ಲಿಸುವ ಸಂದರ್ಭದಲ್ಲೂ ಕೂಡ ಕುಟುಂಬದವರೊಡನೆ ಸಮಯ ಕಳೆಯಿರಿ ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಎಷ್ಟೋ ಆರಕ್ಷಕರು ಕುಟುಂಬದಿಂದ ದೂರವಿದ್ದು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುತ್ತಾರೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದ ಸಿ.ಈ.ತಿಮ್ಮಯ್ಯ, ಗಂಗಾಧರಸ್ವಾಮಿ, ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಹುತಾತ್ಮ ಸಿಬ್ಬಂದಿಗೆ ಪುಷ್ಪಗುಚ್ಛ ಅರ್ಪಿಸಿ ಹಾಗೂ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.