ಸ್ವಾರ್ಥ ಮನೋಭಾವವಿಲ್ಲದೆ ದೇಶಕ್ಕಾಗಿ ಪೊಲೀಸರ ಸೇವೆ: ಡಾ.ಮಾಲತಿ ಪ್ರಿಯಾ

1
Published on

ಮೈಸೂರು: ಯಾವುದೇ ಸ್ವಾರ್ಥ ಮನೋಭಾವ ಇಲ್ಲದೆ ದೇಶಕ್ಕಾಗಿ ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಹೇಳಿದರು.


ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರು, ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆಯಲ್ಲಿ ಮಾತನಾಡಿದರು.


ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮರಾದ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಅವರು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ಬಹಳ ಗೌರವ ನೀಡುವ ಕೆಲಸ ನಮ್ಮದಾಗಬೇಕು. ನಾಗರಿಕರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವ ಮನೋಭಾವ ಬರಬೇಕು ಎಂದರು.


ಚೈನಾದ ಗಡಿ ಲಡಾಕ್‌ನ ಅಕ್ಸಾಯ್ ಪ್ರದೇಶದಲ್ಲಿ 1959ರಲ್ಲಿ ಸಿಆರ್‌ಪಿಎಫ್‌ನ 10 ಪೊಲೀಸರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. 9 ಜನರು ಗಾಯಗೊಂಡು ಸೆರೆಯಾದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅ. 21ರಂದು ಪೊಲೀಸ್ ಹುತ್ಮಾತರ ದಿನ ಆಚರಿಸಲಾಗುತ್ತಿದೆ. ಪೊಲೀಸರ ಕೆಲಸದಲ್ಲಿ ಬದ್ಧತೆ, ತ್ಯಾಗ ಹೆಚ್ಚು ಕಂಡುಬರುತ್ತದೆ. ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುವವರಿಗಿಂತ ಪೊಲೀಸ್ ಇಲಾಖೆಯವರಿಗೆ ಹೆಮ್ಮೆ ಜತೆಗೆ ರಿಸ್ಕ್ ಜಾಸ್ತಿ ಇದೆ ಎಂದರು.


ಇದಕ್ಕೂ ಮುನ್ನ ಡಾ.ಮಾಲತಿ ಪ್ರಿಯಾ ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂವಿನ ಗುಚ್ಛ ಇಟ್ಟು ಗೌರವ ಸಲ್ಲಿಸಿದರು. ಮೃತರ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹುತಾತ್ಮರ ನಾಮವಾಚನ ಮಾಡಿದರು. ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಪರೇಡ್ ಕಮಾಂಡರ್ ಶಂಕರೇಗೌಡ ಅವರ ನೇತೃತ್ವದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಎರಡು ನಿಮಿಷ ಮೌನ ಆಚರಿಸಿ ಗೌರವ ಸಮರ್ಪಿಸಿದರು. ಬಳಿಕ ಪೊಲೀಸ್ ಧ್ವಜಾರೋಹಣ ಮಾಡಲಾಯಿತು.
ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕೆಪಿಎ ನಿರ್ದೇಶಕ ಅನುಪಮ್ ಅಗರವಾಲ್, ಎಸ್ಪಿ ಆರ್.ಚೇತನ್, ಪೊಲೀಸ್ ಅಧಿಕಾರಿಗಳಾದ ದಿವ್ಯಾ ಸಾರಾ ಥಾಮಸ್, ಪ್ರದೀಪ್ ಗುಂಟಿ, ಎಂ.ಮುತ್ತುರಾಜ್, ಡಾ.ಶೇಖರ್, ಬಿ.ಟಿ.ಕವಿತಾ, ಸಜೀತ್, ಜನಾರ್ದನ್, ಡಾ.ನಂದಿನಿ, ಶಿವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net