ಸಾರ್ವಜನಿಕರು ಕೈಜೋಡಿಸಿದರೆ ಸಧೃಡ ಸಮಾಜ

21 ckm 2
Published on

ಚಿಕ್ಕಮಗಳೂರು: ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶೆ ಶುಭಾ ಗೌಡರ್ ಅಭಿಪ್ರಾಯಪಟ್ಟರು.

ರಾಮನಹಳ್ಳಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಮಾತನಾಡಿದರು.

ಕರ್ತವ್ಯ ನಿರ್ವಹಿಸುವಾಗಲೇ ಹಲವಾರು ಪೊಲೀಸರು ಪ್ರಾಣತ್ಯಾಗ ಮಾಡಿರುವ ನಿದರ್ಶನಗಳಿವೆ. ಬಾಹ್ಯ ಹಾಗೂ ಆಂತರಿಕ ಸುರಕ್ಷತೆಯಲ್ಲೂ ಬಹಳಷ್ಟು ಬಲಿದಾನಗಳಾಗಿವೆ. ಇದನ್ನು ಪರಿಗಣಿಸಿ ನಮ್ಮ ಸಾಮಾಜಿಕ ಜವಾಬ್ದಾರಿ ಅರಿತು ನಡೆಯಬೇಕು. ಪೋಲೀಸರಿಂದಲೇ ಎಲ್ಲ ಕೆಲಸವಾಗಬೇಕೆಂಬ ಭಾವನೆ ಬಿಟ್ಟು ಅವರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

1959 ಅ.21ರಂದು ಲಡಾಕ್​ನಲ್ಲಿ ಚೀನಾದವರ ಕುಕೃತ್ಯದಿಂದ ನಮ್ಮ ದೇಶದ ರಕ್ಷಣಾ ತಂಡದಲ್ಲಿದ್ದ ಹಲವಾರು ಮಂದಿ ಹುತಾತ್ಮರಾಗಿದ್ದಾರೆ. ಅಂದು ಮೃತಪಟ್ಟಿದ್ದ 10 ಜನರ ಮೃತದೇಹ ತಕ್ಷಣ ಕೊಡದೆ ಮೂರು ವಾರಗಳ ನಂತರ ನೀಡುತ್ತಾರೆ. ಸೇಡು, ದ್ವೇಷ, ಅಸೂಯೆ ಎಷ್ಟು ತಾಂಡವವಾಡುತ್ತಿದೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ. 1960ರಲ್ಲಿ ರಾಷ್ಟ್ರದ ಐಜಿಪಿಗಳು ಸಭೆ ನಡೆಸಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಮೂರು ಸುತ್ತು ಗಾಳಿಯಲ್ಲಿ ಕುಶಾಲತೋಪು ಹಾರಿಸಿ ರಾಷ್ಟ್ರಗೀತೆಯೊಂದಿಗೆ ವಾಲಿ ಫೈರಿಂಗ್ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ಪ್ರಸಕ್ತ ವರ್ಷ ಕರ್ತವ್ಯದಲ್ಲಿ ಪ್ರಾಣಾರ್ಪಣೆ ಮಾಡಿದ 264 ಹುತಾತ್ಮರ ಹೆಸರನ್ನು ಎಎಸ್ಪಿ ಎನ್.ಎಸ್.ಶ್ರುತಿ ಸಂಸ್ಮರಣೆ ಮಾಡಿದರು.

ಕಂಬನಿ ಮಿಡಿದ ತಾಯಿ ಹೃದಯ: ಅಜ್ಜಂಪುರ ಠಾಣೆ ಮಹಿಳಾ ಮುಖ್ಯ ಪೇದೆ ಶಂಕುತಲಾ ಕರ್ತವ್ಯನಿರತ ಸಂದರ್ಭ ಕರೊನಾದಿಂದ ಇತ್ತೀಚೆಗೆ ಮೃತಪಟ್ಟಿದ್ದರು. ಹುತಾತ್ಮರ ದಿನಾಚರಣೆಗೆ ಮೃತರ ತಾಯಿ ಜಾನಕಮ್ಮ ಅವರನ್ನು ಆಹ್ವಾನಿಸಲಾಗಿತ್ತು. ಹುತಾತ್ಮ ಮುಖ್ಯಪೇದೆ ಹೆಸರು ಹೇಳಿ ಸ್ಮಾರಕಕ್ಕೆ ರೀತ್ ಅರ್ಪಿಸಲು ಅಮ್ಮನನ್ನು ಕರೆಯುತ್ತಿದ್ದಂತೆ ಮಡುಗಟ್ಟಿದ್ದ ದುಃಖ ತಡೆಯಲಾಗಿದೆ ಬಿಕ್ಕಿಬಿಕ್ಕಿ ಕಣ್ಣೀರಿಡುತ್ತಲೇ ಮುಂದೆ ಬಂದರು. ಈ ಸಂದರ್ಭ ಸಭೆಯಲ್ಲಿದ್ದ ಕೆಲವರ ಕಣ್ಣಲ್ಲಿ ನೀರು ತುಂಬಿತ್ತು. ಮಹಿಳಾ ಪೇದೆಗಳ ಸಹಕಾರದಲ್ಲಿ ‘ಓ ಗಾರ್ಡ್’ ಗೀತೆಗೆ ಸ್ಮಾರಕದವರೆಗೂ ಕಣ್ಣೀರು ಹಾಕುತ್ತಲೆ ಹೆಜ್ಜೆ ಹಾಕಿದ ಜಾನಕಮ್ಮ ಮಗಳನ್ನು ನೆನೆದು ಸ್ಮಾರಕಕ್ಕೆ ಕೈಮುಗಿದು ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕರು ಭಾವುಕರಾದರು.

ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿಗೌತಮ್ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನಿಲ್ ಪನ್ವರ್ ಇದ್ದರು. ನ್ಯಾಯಾಧೀಶರಾದ ಬಸವರಾಜ ಚೇಂಗಟಿ, ಶ್ರೀರಾಮ್ ನಾರಾಯಣ ಹೆಗ್ಡೆ, ಎ.ಅರುಣಕುಮಾರಿ, ಡಿಸಿಎಫ್ ಎನ್.ಎಚ್.ಜಗನ್ನಾಥ್, ಕೆಎಸ್​ಆರ್​ಟಿಸಿ ಡಿಸಿ ವೀರೇಶ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಆರ್​ಪಿಐ ಪ್ರದೀಪ್​ಕುಮಾರ್ ಪರೇಡ್ ತುಕಡಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net