ಮಾದಕ ವಸ್ತು ಮುಕ್ತಿಯತ್ತ ಪೊಲೀಸ್ ಹೆಜ್ಜೆ

1003 KLB 06
Published on

ಕಲಬುರಗಿ: ರಾಜ್ಯ ಪೊಲೀಸ್ ೫೦ನೇ ವರ್ಷದ ಸುವರ್ಣ ಮಹೋತ್ಸವ, ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದೊಂದಿಗೆ ನಗರ, ಜಿಲ್ಲಾ ಪೊಲೀಸ್‌ನಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮ್ಯಾರಾಥಾನಲ್ಲಿ ಯುವಕರು, ಹಿರಿಯರು, ಕಿರಿಯರು ಭಾಗವಹಿಸಿ, ಯಶಸ್ವಿಗೊಳಿಸಿದರು.
ಭಾನುವಾರ ಬೆಳಂಬೆಳಗ್ಗೆ ನಗರದ ಐವಾನ್ ಇ ಶಾಹಿ ಅತಿಥಿ ಗೃಹದ ಮುಂಭಾಗದಲ್ಲಿ ಮ್ಯಾರಾಥಾನ್‌ನಲ್ಲಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು, ಬಾಲಕರು ಸಜ್ಜಾಗಿದ್ದು, ಅವರಿಗೆ ನ್ಯಾಯಾಧೀಶ ಸುಶಾಂತ ಚೌಗಲೆ, ಪೊಲೀಸ್ ಕಮೀಷನರ್ ಚೇತನ್ ಆರ್., ಎಸ್‌ಪಿ ಅಕ್ಷಯ ಹಾಕೆ ಹಸಿರು ನಿಶಾನೆ ತೋರಿಸಿದ ತಕ್ಷಣ ಓಟ ಆರಂಭಿಸಿದರು.
ಬೆಳಗ್ಗೆ ಶುರುವಾದ ಮ್ಯಾರಥಾನ್ ಓಟವು ಎಸ್‌ವಿಪಿ ವೃತ್ತ, ಗೋವಾ ಹೊಟೇಲ್ ವೃತ್ತ, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್ ಮಾರ್ಗವಾಗಿದಲ್ಲಿ ಐದು ಕಿ.ಮೀ. ಸಂಚರಿಸಿ, ಪೊಲೀಸ್ ಪರೇಡ್ ಮೈದಾನ ತಲುಪಿತು.
ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶ ಸುಶಾಂತ ಚೌಗಲೆ, ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಎಲ್ಲರೂ ವಿಶೇಷವಾಗಿ ಪೊಲೀಸರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಕಮಿಷನರ್ ಚೇತನ್ ಆರ್., ಎಸ್ಪಿ ಅಕ್ಷಯ ಹಾಕೆ, ಎಎಸ್ಪಿ ಬಿಂದುಮಣಿ, ಕೆಎಸ್‌ಆರ್‌ಪಿ ಕಮಾಂಡೆಂಡ್ ಬಸವರಾಜ, ಯುನೈಟೆಡ್ ಆಸ್ಪತ್ರೆ ಹಿರಿಯ ವೈದ್ಯ ಡಾ.ಮೊಹಮ್ಮದ್ ಅಬ್ದುಲ್ ಬಷೀರ್, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net