

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗೂ ಕೆಎಂಸಿಆರ್‌ಐ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ ಅವರು ಜತೆಗೂಡಿ 28 ಕಿ.ಮೀ. ರಾಮಸೇತು ಈಜುವ ಮೂಲಕ ಶುಕ್ರವಾರ ಮೈಲಿಗಲ್ಲು ಸಾಧಿಸಿದ್ದಾರೆ.
ಇವರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿವರೆಗೆ ರಾಮಸೇತು ಮೂಲಕ 28 ಕಿ.ಮೀ. ಸ್ವಿಮ್ಮಿಂಗ್(ಈಜು)ನ್ನು ರಿಲೇ ತಂಡದೊಂದಿಗೆ 8 ಗಂಟೆ 30 ನಿಮಿಷದಲ್ಲಿ ಕ್ರಮಿಸಿದ್ದಾರೆ. ಈ ವಿಶೇಷ ತಂಡದಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳೂ ಇದ್ದರು. ಹಿಂದುಮಹಾಸಾಗರ ಮತ್ತು ಬಂಗಾಳಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಮತ್ತು ಭಾರಿ ಅಲೆಗಳ ನಡುವೆಯೂ ನಿರಂತರವಾಗಿ ಈಜಿ ಅದ್ಭುತ ಸಾಧನೆ ಮಾಡಿದ್ದಾರೆ.
ಐರನ್‌ಮ್ಯಾನ್ ಮುರುಗೇಶ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸೇರಿ ಇತರ ಕ್ರೀಡೆಯಲ್ಲಿ ಸಾಧನೆಗಳ ಮೂಲಕ ಪೊಲೀಸ್ ಇಲಾಖೆ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ ಹೆಸರು ಮಾಡಿದ್ದಾರೆ. ಪತ್ನಿ ಶ್ವೇತಾ ಚನ್ನಣ್ಣವರ ಅವರು ಕೂಡ ಮುರುಗೇಶ ಅವರ ಜತೆ ಬೋಟಿನಲ್ಲಿ ಶ್ರೀಲಂಕಾಗೆ ಹೋಗಿರುವುದು ವಿಶೇಷ.
ಮತ್ತೊಂದು ಮೈಲಿಗಲ್ಲು: ಮುರುಗೇಶ ಚನ್ನಣ್ಣವರ ಹಾಗೂ ಅಮನ್ ಶಾನಭಾಗ ಅವರು ಮತ್ತೊಂದು ಮೈಲುಗಲ್ಲು ಸಾಧಿಸಲಿದ್ದಾರೆ. ಮುಂಬರುವ ಜೂನ್‌ನಲ್ಲಿ ವಿಶ್ವದ ಅತಿ ಕಷ್ಟಕರವಾದ ಇಂಗ್ಲಿಷ್ ಕಾಲುವೆ (ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯ 36 ಕಿ.ಮೀ. ಕಾಲುವೆ) ಈಜಲು ಹೊರಡಲಿದ್ದಾರೆ. ಆರು ಜನರ ಎರಡು ತಂಡ ಇರಲಿದೆ.