ಆಟೋದಲ್ಲಿ ಬಂಗಾರ ಬಿಟ್ಟಿಳಿದ ಮಹಿಳೆ ಪತ್ತೆ ಹಚ್ಚಿದ ಪೊಲೀಸರು

1802Klb008
Published on

ಕಲಬುರಗಿ: ಆಟೋವೊಂದರಲ್ಲಿ ಪ್ರಯಾಣಿಸಿದ ಮಹಿಳೆ ಆಭರಣ ಸಹಿತ ಬ್ಯಾಗ್ ಮರೆತು ಇಳಿದಿದ್ದು, ಅದನ್ನು ಒಂಬತ್ತು ಗಂಟೆಯಲ್ಲೇ ಪತ್ತೆ ಹಚ್ಚಿ, ವಾಪಸ್ ನೀಡುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಗ್‌ನಲ್ಲಿದ್ದ 13.42 ಲಕ್ಷ ರೂ. ಮೌಲ್ಯದ 220 ಗ್ರಾಂ (22 ತೊಲೆ) ಬಂಗಾರ ಮಾಲಿಕರಿಗೆ ಭಾನುವಾರ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಮರಳಿ ನೀಡಿದರು.

ನಗರದ ಹಳೇ ಜೇವರ್ಗಿ ರಸ್ತೆಯ ಎಸ್‌ಬಿಐ ಕಾಲನಿಯ ರೇಖಾ ಮೇಳಕುಂದಿ ಅವರು ಸಹೋದರಿ ಮದುವೆ ನಿಮಿತ್ತ ಶನಿವಾರ ಸಂಜೆ ಬಸವಕಲ್ಯಾಣಕ್ಕೆ ಹೋಗಲು ಆಟೋದಲ್ಲಿ ಬಂದು, ಕೇಂದ್ರ ಬಸ್ ನಿಲ್ದಾಣದ ಬಳಿ ಜತೆಗೆ ತಂದಿದ್ದ ಬ್ಯಾಗ್ ಬಿಟ್ಟು ಇಳಿದಿದ್ದಾರೆ. ನಂತರ ಮರಳಿ ಆಟೋದಿಂದ ಇಳಿದ ಸ್ಥಳಕ್ಕೆ ಬಂದಿದ್ದು, ಆಟೋ ದೊರೆಯದಿದ್ದಕ್ಕೆ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಆಟೋ ಸಂಚರಿಸಿದ ಮಾರ್ಗದಲ್ಲಿನ ಜನತಾ ಬೇಕರಿ, ಸಂತೋಷ ಕಾಲನಿಯ ಆಟೋ ಸ್ಟ್ಯಾಂಡ್​, ವಿಆರ್‌ಎಲ್ ಕಚೇರಿ ಎದುರಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಆದರೆ ಆಟೋ ಸಂಖ್ಯೆ ಕಂಡು ಬಂದಿರುವುದಿಲ್ಲ. ಆದರೆ ಆಟೋ ಹಿಂದೆ ಅಂಟಿಸಿದ ಖಾಸಗಿ ಕಂಪನಿಯ ಜಾಹೀರಾತು ಗುರುತಿಸಲಾಗಿದೆ. ಕಂಪನಿಯನ್ನು ಸಂಪರ್ಕಿಸಿದ ಪೊಲೀಸರು, ನಗರದಲ್ಲಿ 200 ಆಟೋಗಳಿಗೆ ಜಾಹೀರಾತು ಅಂಟಿಸಲಾಗಿದೆ ಎಂದಿದ್ದಾರೆ. 200 ಆಟೋಗಳ ಚಿತ್ರ ಕಳುಹಿಸಿದ್ದು ಅದರಲ್ಲಿದ್ದ ಒಂದು ಆಟೋ ಮತ್ತು ಸಿಸಿ ಕ್ಯಾಮೆರಾದಲ್ಲಿ ಗುರುತಿಸಿದ ಆಟೋದ ಚಿತ್ರ ಹೋಲಿಕೆ ಮಾಡಿ, ಅದರ ಮಾಲಿಕರನ್ನು ಪತ್ತೆ ಹಚ್ಚಲಾಗಿದೆ.

ಹೀರಾಪುರದ ಆಟೋ ಚಾಲಕ ಅಣವೀರಪ್ಪ ನಾಗಪ್ಪ ಅವರ ಮನೆಗೆ ರಾತ್ರಿ ೨.೩೦ಕ್ಕೆ ಪೊಲೀಸರು ಭೇಟಿ ನೀಡಿ, ಪ್ರಶ್ನಿಸಿದ್ದು ಬ್ಯಾಗ್ ಬಿಟ್ಟು ಇಳಿದಿದ್ದರು. ಅದನ್ನು ತಂದು ಮನೆಯಲ್ಲಿ ಇಟ್ಟಿz್ದೆÃನೆ ಎಂದು ಬ್ಯಾಗ್ ವಾಪಸ್ ನೀಡಿದ್ದಾರೆ. ಪರಿಶೀಲಿಸಿದ್ದಾಗ ಮಹಿಳೆ ದೂರಿನಲ್ಲಿ ತಿಳಿಸಿದ್ದ ಎಲ್ಲ ಆಭರಣಗಳಿರುವುದು ದೃಢಪಟ್ಟಿದೆ. ಭಾನುವಾರ ಪರಿಶೀಲನೆ ನಡೆಸಿ, ಸೂಕ್ತ ಮಾಹಿತಿ ಪಡೆದು ಆಭರಣ ಸಹಿತ ಬ್ಯಾಗ್‌ನ್ನು ಮಾಲಿಕರಿಗೆ ವಾಪಸ್ ನೀಡಿದ್ದಾರೆ.
ಆಯುಕ್ತ ಆರ್.ಚೇತನ, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣಕುಮಾರ ಮಾರ್ಗದರ್ಶನ, ಚಂದ್ರಶೇಖರ ನೇತೃತ್ವದಲ್ಲಿ ಅಶೋಕ ನಗರ ಠಾಣೆ ಪಿಐ ಮಹಾಂತೇಶ, ಗುಪ್ತ ಮಾಹಿತಿ ವಿಭಾಗದ ಸಿಬ್ಬಂದಿ ನೀಲಕಂಠ ಪಾಟೀಲ್ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net