

ನೆಲಮಂಗಲ: ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಅವರ ಹತ್ಯೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಭೀಮ್ ಆರ್ಮಿ ಸಂಘಟನೆಯಿಂದ ನೆಲಮಂಗಲ ಚಲೋ ಶೀರ್ಷಿಕೆಯಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದ ಬಳಿ ಮಂಗಳವಾರ ಸಮಾವೇಶಗೊಂಡ ವಿವಿಧ ಪರಿಶಿಷ್ಟ ಜಾತಿ, ಪಂಗಡದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ನಗರ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 13 ರಂದು ಭಾಸ್ಕರ್ ಪ್ರಸಾದ್ ಮೇಲೆ ಹಲ್ಲೆ ಯತ್ನ ನಡೆಸಿದ್ದು, ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ನೀಡಿದ್ದರೂ ಶಿಸ್ತು ಕ್ರಮ ಕೈಗೊಂಡಿಲ್ಲ. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಭೀಮ್ ಆರ್ಮಿ ಸಂಘಟನೆ ರಾಷ್ಟೀಯ ಅಧ್ಯಕ್ಷ ಚಂದ್ರಶೇಖರ್‌ಆಝಾದ್ ರಾವಣ್ ಮಾತನಾಡಿ, ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ರಕ್ಷಣೆ ನೀಡಬೇಕಾದ ಅಧಿಕಾರಿಗಳು ರಾಜಕೀಯ ಪಕ್ಷದ ಕೈಗೊಂಬೆಗಾಗಿ ಕುಣಿಯುತ್ತಿದ್ದಾರೆ. ಬೇರೆಯವರ ಹಕ್ಕನ್ನು ಕಸಿದುಕೊಳ್ಳವುದು ಕಾನೂನು ಬಾಹಿರ. ಎಲ್ಲರೂ ಒಂದಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.
ಕರ್ನಾಟಕ ದಲಿತ ಸಮರ ಸೇನೆ ಅಧ್ಯಕ್ಷ ವಿ.ಶ್ರೀನಿವಾಸ್, ಭೀಮ್ ಆರ್ಮಿ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ತಬ್ಸಮ್, ಸೋಸಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಗ್ರಾಮಾಂತರ ಮತ್ತು ನಗರ ಜಿಲ್ಲಾಧ್ಯಕ್ಷ ಎ.ಎಂ.ಗಂಗಪ್ಪ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿ ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎನ್.ಕನಕರಾಜು, ವಕೀಲ ಪ್ರೊ.ಹರಿರಾಮ್, ಸಾಹಿತಿ ಯೋಗೇಶ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
ನೂರಾರು ಮಂದಿ ಕಾರ್ಯಕರ್ತರು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರಿಂದ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಗ್ರಾಮಾಂತರ ಠಾಣೆಪಿಎಸ್.ಐ ಟಿ.ಎಚ್.ವಸಂತ್, ಮೋಹನ್‌ಕುಮಾರ್, ವಿ.ಅಂಜನ್‌ಕುಮಾರ್ ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿದ್ದರು.