ದ್ವಿಚಕ್ರ ವಾಹನಗಳ ಡಿಕ್ಕಿ: ಪುಂಜಾಲಕಟ್ಟೆ ಠಾಣೆ ಹೆಡ್‌ಕಾನ್ಸ್‌ಟೆಬಲ್ ಮೃತ್ಯು

Abubakkar
Published on

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ಮೂರ್ಜೆ ಬಳಿಯ ನೇರಳಕಟ್ಟೆ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವೇಣೂರಿನ ಮರೊಳಿ ನಿವಾಸಿ ಅಬೂಬಕ್ಕರ್(47) ಮೃತಪಟ್ಟಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅವರು ವಾಮದಪದವಿನಲ್ಲಿ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮತ್ತೊಂದು ಬೈಕಿನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್‌ಎಂಬುವರಿಗೂ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಅಬೂಬಕ್ಕರ್ ಅವರು ಪುಂಜಾಲಕಟ್ಟೆಯ ಇತರ ಸಿಬ್ಬಂದಿ ಜತೆ ಗೃಹ ಪ್ರವೇಶಕ್ಕೆ ತೆರಳಿದ್ದು, ಅಬೂಬಕ್ಕರ್ ಅವರು ತನ್ನ ಬೈಕಿನಲ್ಲಿ ವಾಪಸು ಆಗುತ್ತಿದ್ದರೆ ಉಳಿದವರು ಇಲಾಖಾ ಜೀಪಿನಲ್ಲಿ ಆಗಮಿಸುತ್ತಿದ್ದರು. ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದರು. ಗಾಯಾಳುಗಳನ್ನು ತಕ್ಷಣ ಹಿಂಬದಿಯಿಂದ ಜೀಪಿನಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದು, ಅಬೂಬಕ್ಕರ್ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net