ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ,  ಗೃಹ ಸಚಿವ ಪರಮೇಶ್ವರ ಹೇಳಿಕೆ

Published on

ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲಾಗಿದೆ. ಯಾರೇ ಕಾನೂನು ಮೀರಿ ನಡೆದುಕೊಂಡರೆ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಫ್ರೀ ಹ್ಯಾಂಡ್ ಇಲ್ಲದ ಕಾರಣ ಅಪರಾಧ ಪ್ರಕರಣ ಹೆಚ್ಚುತ್ತಿವೆ ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆಯಲ್ಲಿ ಹುರುಳಿಲ್ಲ. ಸಮಯ ಬಂದಾಗ ಅವರಿಗೆ ಅಂಕಿ ಸಂಖ್ಯೆ ಸಮೇತ ಉತ್ತರ ನೀಡುವೆ ಎಂದು ಹೇಳಿದರು.

ರಾಜ್ಯದಲ್ಲಿ ಕಠಿಣವಾದ ಕಾನೂನು ಇದ್ದರೂ ಕೆಲವೆಡೆ ಕೊಲೆ, ಗುಂಪು ಘರ್ಷಣೆ ಪ್ರಕರಣಗಳು ನಡೆದಿದೆ. ಇಂತಹ ಪ್ರಕರಣ ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ಈ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಅದನ್ನು ಮಾಡುತ್ತೇವೆ ಎಂದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ ಬೆದರಿಕೆ ಬಂದಿರುವ ಬಗ್ಗೆ ಮಾಹಿತಿ ಪಡೆದು ಸತ್ಯವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬದವರಿಗೆ ಪರಿಹಾರ ವಿಷಯದಲ್ಲಿ ಸರ್ಕಾರ ಕಡಿಮೆ ನೀಡುತ್ತಿದೆ ಎಂಬ ಪ್ರಶ್ನೆಗೆ ಬಿಜೆಪಿಯವರ ಬಳಿ ಹಣ ಜಾಸ್ತಿ ಇದೆ, ಅವರು ಕೊಡ್ತಾರೆ ಎಂದು ಪರಮೇಶ್ವರ ಉತ್ತರಿಸಿದರು.

ರಾಜ್ಯದಲ್ಲಿ ಕೋಮುವಾದ ನಿಗ್ರಹ ಪಡೆ ರಚಿಸುವ ಬಗ್ಗೆ ಆತುರದ ನಿರ್ಧಾರ ಇಲ್ಲ. ಇದಕ್ಕಾಗಿ ಸಮಗ್ರ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು, ಅದಕ್ಕೊಂದು ಚೌಕಟ್ಟು ಮಾಡಿ ಅಧಿಕಾರ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net