

ಕೋಟ: ಕಳೆದ ಸೋಮವಾರ ಕೋಟ ಹೈಸ್ಕೂಲ್ ಬಳಿ ಪ್ರಶಾಂತ್ ಎಂಬುವರ ಮೇಲೆ ಕೋಟ ಆರಕ್ಷಕರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕೋಟದ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ನೇತೃತ್ವದಲ್ಲಿ ಸಾಲಿಗ್ರಾಮದಿಂದ ಕೋಟ ಹೈಸ್ಕೂಲ್‌ವರೆಗೆ ಸೋಮವಾರ ಕಾಲ್ನಡಿಗೆಯ ಮೂಲಕ ಸೋಮವಾರ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಗಾಣಿಗ, ಪೊಲೀಸ್ ಇಲಾಖೆ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಕಂಡಕಂಡಲ್ಲಿ ವಾಹನ ಅಡ್ಡಗಟ್ಟಿ ದಂಡ ವಿಧಿಸುವುದು, ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಇಂತಹ ಪೊಲೀಸ್ ಅಧಿಕಾರಿಗಳನ್ನು ಶೀಘ್ರ ಅಮಾನತುಗೊಳಿಸಿ ನ್ಯಾಯ ದೊರಕಿಸಬೇಕು. ಇಲ್ಲವಾದಲ್ಲಿ ಠಾಣೆ ಎದುರು ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಹೇಳಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಡಿವೈಎಸ್‌ಪಿಗೆ ಮನವಿ ಸಲ್ಲಿಸಲಾಯಿತು.
ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಠಾಣೆಯ ಪಿಎಸ್‌ಐ ಸಂತೋಷ್ ಬಿ.ಪಿ, ಅಪರಾಧ ದಳದ ಪುಷ್ಪರಾಮ್, ಸಂತ್ರಸ್ತ ಪ್ರಶಾಂತ್, ತಾಯಿ ಶಾರದಾ, ಹಾಗೂ ಸುಧೀರ್, ಗಿರೀಶ್, ಸಂದೀಪ್ ಕುಂದರ್ ಕೋಡಿ, ಸುಧಾಕರ್ ಮತ್ತಿತರರು ಪಾಲ್ಗೊಂಡಿದ್ದರು.