ಪುನಃ ಸದ್ದು ಮಾಡಿದ ಪೊಲೀಸರ ಬಂದೂಕು

ಕೊಲೆ ಆರೋಪಿ ಬಂಧನದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿರುವ ಅಡಿಷನಲ್​ ಎಸ್ಪಿ ಕೆ.ಎಸ್​.ನಾಗರಾಜ್​ ಮತ್ತು ಡಿವೈಎಸ್​ಪಿ ಮೋಹನ್​ ಮತ್ತು ತಂಡ.
ಕೊಲೆ ಆರೋಪಿ ಬಂಧನದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿರುವ ಅಡಿಷನಲ್​ ಎಸ್ಪಿ ಕೆ.ಎಸ್​.ನಾಗರಾಜ್​ ಮತ್ತು ಡಿವೈಎಸ್​ಪಿ ಮೋಹನ್​ ಮತ್ತು ತಂಡ.
Published on

ಕೊಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು, ಇನ್​ಸ್ಪೆಕ್ಟರ್​ ಮಂಜುನಾಥ್​ ನೇತೃತ್ವದಲ್ಲಿ ಬಂಧನ

ಆನೇಕಲ್​: ಮೂರು ದಿನದ ಹಿಂದೆ ಆನೇಕಲ್​ ಪುರಸಭೆಯ ಸದಸ್ಯ ರವಿ ಕೊಲೆ ಪ್ರಕರಣದಲ್ಲಿ ಆರೋಪಿ ಕಾರ್ತಿಕ್​ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದ ಪೊಲೀಸರು, ಶನಿವಾರ ತಾಲೂಕಿನ ಬನ್ನೇರುಟ್ಟ ಸಮೀಪದ ರಾಗಿಹಳ್ಳಿ ಕಾಡಂಚಿನಲ್ಲಿ ಅಡಗಿದ್ದ ದುರುಳನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ವೆಂಕಟರಾಜ್​ ಬಂಧಿತ. ಈತ ಒಂದು ಕೊಲೆ, ಮೂರು ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ.
15 ದಿನದ ಹಿಂದೆ ಅತ್ತಿಬೆಲೆ ಪೊಲೀಸ್​ ಠಾಣೆ ವ್ಯಾಪ್ತಿಯ ಮಾಯಸಂದ್ರ ಸಮೀಪ ವೆಂಕಟರಾಜು ಹಾಗೂ ಆತನ ಗ್ಯಾಂಗ್​ ಮುನೇಂದ್ರ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿತ್ತು. ಇದಲ್ಲದೆ ಸೂರ್ಯನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಶನಿವಾರ ಸಂಜೆ ಬನ್ನೇರುಟ್ಟ ಸಮೀಪದ ರಾಗಿಹಳ್ಳಿ ಕಾಡಂಚಿನಲ್ಲಿ ಆರೋಪಿ ಇರುವ ಮಾಹಿತಿ ಮೇರೆಗೆ ಬಂಧನಕ್ಕೆ ಸಿಬ್ಬಂದಿ ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಿಗಣಿ ಠಾಣೆ ಇನ್​ಸ್ಪೆಕ್ಟರ್​ ಮಂಜುನಾಥ್​ ಸೂಚನೆ ನೀಡಿದರೂ ಸುಮ್ಮನಾಗದ ಆರೋಪಿ, ಅಪರಾಧ ವಿಭಾಗದ ಪೇದೆ ವಿನಯ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್​ಸ್ಪೆಕ್ಟರ್​ ಮಂಜುನಾಥ್​, ವೆಂಕಟರಾಜು ಕಾಲಿಗೆ ಗುಂಡೇಟು ಹೊಡೆದು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿದ್ದ ವೆಂಕಟರಾಜು ಹಾಗೂ ಪೊಲೀಸ್​ ಅಪರಾಧ ವಿಭಾಗದ ಪೇದೆ ವಿನಯ್​ ಇಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಡಿಷನಲ್​ ಎಸ್ಪಿ ಕೆ.ಎಸ್​.ನಾಗರಾಜ್​ ಮತ್ತು ಡಿವೈಎಸ್​ಪಿ ಮೋಹನ್​ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬನ್ನೇರುಟ್ಟ ಇನ್​ಸ್ಪೆಕ್ಟರ್​ ಕೃಷ್ಣಕುಮಾರ್​, ಇನ್​ಸ್ಪೆಕ್ಟರ್​ ಸಂಜೀವ್​ ಮಹಾಜನ್​, ಜಿಗಣಿ ಸಿಪಿಐ ಮಂಜುನಾಥ್​, ಅತ್ತಿಬೆಲೆ ಪಿಎಸ್​ಐ ಮುರಳಿ ಇದ್ದರು.

ಚುನಾವಣೆ ಸಂದರ್ಭದಲ್ಲೂ ತಲೆಮರೆಸಿಕೊಂಡಿದ್ದ: ಕಳೆದ ಚುನಾವಣೆ ಸಂದರ್ಭದಲ್ಲಿ ಸೂರ್ಯನಗರ ಪೊಲೀಸರು ವೆಂಕಟರಾಜ್​ನನ್ನು ಗಡಿಪಾರು ಮಾಡಿದ್ದರು. ಆದರೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ. ಹೀಗಾಗಿ ಈತನ ಬಂಧನ ಮಾಡಲೇಬೇಕು ಎಂದು ಹಿರಿಯ ಪೊಲೀಸರು ಸೂಚನೆ ಕೊಟ್ಟಿದ್ದರು. ಅಂತೆಯೇ, ಮಾಹಿತಿ ಕಲೆಹಾಕಿದ ಪೊಲೀಸರು, ರಾಗಿಹಳ್ಳಿ ಸಮೀಪದ ಅರಣ್ಯದಲ್ಲಿ ಆರೋಪಿ ಬರುತ್ತಿದ್ದ ಬೈಕ್​ಗೆ ಅಡ್ಡ ಹಾಕಿದ್ದಾರೆ. ಈ ವೇಳೆ ಸೂರ್ಯ ನಗರ ಇನ್​ಸ್ಪೆಕ್ಟರ್​ ಸಂಜೀವ್​ ಮಹಾಜನ್​ ಹಾಗೂ ಪೇದೆ ವಿನಯ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮ ರಕ್ಷಣೆಗೆ ಇನ್​ಸ್ಪೆಕ್ಟರ್​ ಮಂಜುನಾಥ್​, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net