ಮನೆ ಮನೆಯತ್ತ ಪೊಲೀಸರು, ನಾಗರಿಕ ಸ್ನೇಹ ವಾತಾವರಣ ನಿರ್ಮಾಣಕ್ಕೆ ಕಸರತ್ತು

IMG_20250801_221457.jpg
Published on

ಚಿಕ್ಕಬಳ್ಳಾಪುರ: ಠಾಣೆಗಳಿಗೆ ಜನರು ಬಂದ ಸಂದರ್ಭದಲ್ಲಿ ಗತ್ತಿನಲ್ಲಿ ಮಾತನಾಡಿಸುತ್ತಿದ್ದ ಪೊಲೀಸರು ಮನೆ ಮನೆಗೂ ಭೇಟಿ ನೀಡಿ, ವಿನಯವಾಗಿ ಕಾನೂನು ತಿಳಿವಳಿಕೆ ಮೂಡಿಸುವುದರ ಜತೆಗೆ ಸ್ಥಳೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಪೊಲೀಸ್‌ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಇಲಾಖೆಯ ಆಯುಕ್ತರು ವಿಶೇಷ ಮನೆ ಮನೆ ಪೊಲೀಸ್‌ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಕೈಗೊಳ್ಳಲು ಆದೇಶಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಿಬ್ಬಂದಿ ಖಾಕಿ ಸಮವಸ್ತ್ರದಲ್ಲಿಯೇ ತೆರಳಿ, ಜನರೊಂದಿಗೆ ಚರ್ಚಿಸುತ್ತಿದ್ದು ಇದೇ ವೇಳೆ ತಂಡದ ವಿನಯ, ಸೌಜನ್ಯ ಹಾಗೂ ಸ್ನೇಹಪರ ವರ್ತನೆಯ ಪ್ರದರ್ಶನದಿಂದ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಮಾತುಗಳನ್ನು ನೆನೆಪಿಸಿಕೊಳ್ಳುವಂತಾಗಿದೆ.

*ಸಾರ್ವಜನಿಕ ದೂರು ಸಾಮಾನ್ಯ 
ಸಾಮಾನ್ಯವಾಗಿ ದೂರು ದಾಖಲಿಸುವ, ವಿಚಾರಣೆ ಸೇರಿದಂತೆ ನಾನಾ ಕೆಲಸಗಳ ಹಿನ್ನೆಲೆಯಲ್ಲಿ ಜನರು ಪೊಲೀಸ್‌ ಠಾಣೆಗಳಿಗೆ ತೆರಳಿದಾಗ ಸರ್ಮಪಕ ಸ್ಪಂದನೆ ಸಿಗುವುದಿಲ್ಲ. ಗತ್ತಿನಿಂದ ಪ್ರಶ್ನಿಸುವ ರೀತಿಯಲ್ಲಿ ವರ್ತಿಸಲಾಗುತ್ತದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿರುತ್ತವೆ. ಇದಕ್ಕೆ ಬಡ ಅಮಾಯಕರು ಮಧ್ಯವರ್ತಿಗಳು ಇಲ್ಲವೇ ನಾಯಕರ ಶಿಫಾರಸಿನೊಂದಿಗೆ ಸಂಪರ್ಕಿಸಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯ ಜನರನ್ನು ಸಹ ಕಳ್ಳರ ರೀತಿಯಲ್ಲಿ ಕಾಣಲಾಗುತ್ತದೆ. ನಯವಾಗಿ ಮಾತನಾಡಿದರೂ ಗದರಲಾಗುತ್ತದೆ. ಮಾಹಿತಿಗಾಗಿ ಪ್ರಶ್ನೆ ಕೇಳುವಂತಿಲ್ಲ. ಅವರು ಹೇಳಿದ್ದನ್ನು ಕೇಳಿ ಬರಬೇಕೆಂಬ ದೂರುಗಳು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಹಲವರು ಪೊಲೀಸ್‌ ಠಾಣೆಗಳಿಗೆ ಹೋಗುವುದು ಇಲ್ಲವೇ ಪೊಲೀಸರು ಮನೆಗಳಿಗೆ ಬರುವುದು ಒಂದು ದೊಡ್ಡ ಅಪರಾಧ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

*ನಾಗರಿಕ ಸ್ನೇಹಿ ಇಲಾಖೆ
ಜಿಲ್ಲೆಯಲ್ಲಿ ಪೊಲೀಸ್‌ ಸ್ನೇಹಿ ವಾತಾವರಣ ನಿರ್ಮಿಸುವ ವಿಚಾರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ಮೊದಲಿನಿಂದಲೂ ವಿಶೇಷ ಆದ್ಯತೆ ನೀಡುತ್ತಿದ್ದು ಮನೆ ಮನೆ ಪೊಲೀಸ್‌ ಅಭಿಯಾನಕ್ಕೆ ಜತೆಯಲ್ಲಿ ದಿನಕ್ಕೊಂದು ಸೈಬರ್‌ ಅಪರಾಧ ಜಾಗೃತಿ ಹಾಗೂ ಸಂಚಾರಿ ನಿಯಮಗಳ ಸಂದೇಶ ರವಾನೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ನಿಯಮಗಳ ಮಹತ್ವದ ಉಪನ್ಯಾಸ, ಠಾಣೆಗಳಿಗೆ ಆಹ್ವಾನಿಸಿ ಕಾರ್ಯ ನಿರ್ವಹಣೆಯ ಪ್ರಾತ್ಯಕ್ಷಿಕೆ ತೋರಿಸುವುದು, ಬ್ಯಾಂಕುಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲನೆ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಲು ಫುಟ್‌ ಪೆಟ್ರೋಲಿಂಗ್‌, ಅಪ್ರಾಪ್ತರ ವಾಹನ ಚಾಲನೆ ಪತ್ತೆ, ಕರ್ಕಶ ಧ್ವನಿಯ ಬೈಕ್‌ ಸೈಲೆನ್ಸರ್‌ಗಳ ನಾಶ, ಹೆಲ್ಮೆಟ್‌ ವಿತರಣೆ ಪೊಲೀಸ್‌ ಮಾದರಿ ಗ್ರಾಮ, ಠಾಣೆಗಳಲ್ಲಿ ಶ್ರಮದಾನ ಸೇರಿದಂತೆ ವಿವಿಧ ಕ್ರಿಯಾಶೀಲ ಚಟುವಟಿಕೆಯ ಮೂಲಕ ಇಲಾಖೆಯು ಗಮನ ಸೆಳೆಯುತ್ತಿದೆ.

*ಮನೆ ಮನೆ ಪೊಲೀಸ್‌
ಆಯಾ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮನೆ ಪೊಲೀಸ್‌ ಅಭಿಯಾನವು ಕಳೆದ ಹಲವು ದಿನಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದ್ದು ಫೋಕ್ಸೋ, ಬಾಲ್ಯ ವಿವಾಹ, ಸೈಬರ್‌ ಅಪರಾಧ, ಸಹಾಯವಾಣಿ ಕೇಂದ್ರಗಳು ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಿಎಸ್‌ಐ ನೇತೃತ್ವದ ತಂಡವು ಮನೆ ಮನೆಗಳ ಬಳಿಗೆ ಬಂದು ಮಾಹಿತಿ ಕೇಳುತ್ತಿರುವುದಕ್ಕೆ ಜನರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು ಇದೇ ವೇಳೆ ಸ್ಥಳೀಯವಾಗಿ ಅಪರಾಧ, ಭದ್ರತೆ, ಬೆಳವಣಿಗೆಗಳ ಬಗ್ಗೆ ಪರಸ್ಪರ ಮುಕ್ತ ಚರ್ಚೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು, ಪೊಲೀಸ್‌ ಹಾಗೂ ನಾಗರಿಕ ನಡುವಿನ ಸ್ನೇಹಯುತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net