ಸಾಗರದಲ್ಲಿದ್ದಾನೆ ಪೊಲೀಸ್ ಗಣಪ!

21 sgr
ಸಾಗರ ನಗರ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೆರವಣಿಗೆಗೂ ಮುನ್ನ ಪೊಲೀಸರ ತಂಡ.
Published on

ಸಾಗರ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ನೂರೆಂಟು ಸಾಹಸದ ಕಥೆಗಳಿರುತ್ತದೆ. 1967ರಲ್ಲಿ ನಡೆದ ಘಟನೆಯೊಂದು ಸಾಗರದ ಪೇಟೆ ಪೊಲೀಸ್ ಠಾಣೆಯಲ್ಲಿಯೇ ನಿರಂತರವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಮಾಡಿತು ಎಂದರೆ ಅಚ್ಚರಿಯಾಗುತ್ತದೆ.
ಸಾಗರದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದು ಮಹಾಸಭಾದಿಂದ ಗಣಪತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತಿತ್ತು. 1967ರಲ್ಲಿ ಸಾಗರದ ಪ್ರಮುಖ ಬೀದಿಯಲ್ಲಿ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಆಗಮಿಸುತ್ತಿದ್ದಾಗ ಸಣ್ಣ ವಿಚಾರಕ್ಕೆ ಎರಡು ಕೋಮುಗಳ ನಡುವೆ ಮೈಕ್‌ನಲ್ಲಿ ಕೂಗುವ ವಿಚಾರ ಘರ್ಷಣೆಗೆ ಕಾರಣವಾಯಿತು. ಕಲ್ಲು ತೂರಾಟವೂ ನಡೆಯಿತು. ಪರಿಸ್ಥಿತಿ ಹತೋಟಿಗೆ ಬರದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದರು. ಗಣಪತಿ ವಿಸರ್ಜನೆಗೆ ಹೊರಟ ಭಕ್ತರು ಮೆರವಣಿಗೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹೋದರು. ಗಣಪತಿ ರಸ್ತೆ ಮಧ್ಯೆದಲ್ಲಿಯೇ ನಿಂತುಬಿಟ್ಟಿತು. ಇಡೀ ಊರು ಮೌನವಾಯಿತು. ಸಾಗರ ಪಟ್ಟಣದ ಪೊಲೀಸರು ಗಣೇಶನನ್ನು ಅಂದು ಐತಪ್ಪ ಸರ್ಕಲ್‌ನಲ್ಲಿದ್ದ ಪೊಲೀಸ್ ಠಾಣೆಗೆ ತಂದು ಪೂಜೆ ಸಲ್ಲಿದರು.
ಗಲಭೆಯ ಪರಿಣಾಮ ಅಂದು ಸಮಿತಿಯ ಅಧ್ಯಕ್ಷರಾಗಿದ್ದ ಸಾಗರದ ವೈದ್ಯ ಡಾ. ಕೆ.ಎ.ಐತಾಳ್, ರಾಮಚಂದ್ರ ರಾವ್ ಹೆಗ್ಗೋಡು ಮುಂತಾದವರ ಮೇಲೆ ಪ್ರಕರಣ ದಾಖಲಾಯಿತು. ಗಣಪತಿ ವಿಸರ್ಜನೆಗೆ ಮೂರು ದಿನಗಳ ನಂತರ ನ್ಯಾಯಾಲಯ ಅನುಮತಿ ನೀಡಿತು. ಆಗಿನ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ರಂಗನಾಥ್ ಅವರು ವಿನಾಯಕನ ಪೂಜೆ ಮತ್ತು ಆರಾಧನೆಯ ಜವಾಬ್ದಾರಿಯನ್ನು ಹೊತ್ತಿದ್ದು ಕೊನೆಗೆ ಪೊಲೀಸರು ಒಟ್ಟಾಗಿ ಬಿಗಿ ಬಂದೋಬಸ್ತ್‌ನೊಂದಿಗೆ ಸಾಗರದ ಗಣಪತಿ ಕೆರೆಯಲ್ಲಿ ವಿನಾಯಕನ ಮೂರ್ತಿ ವಿಸರ್ಜನೆ ಮಾಡಿದರು.
1968ರಿಂದ ನಿರಂತರವಾಗಿ ಸಾಗರ ನಗರ ಠಾಣೆಯಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಅಂದೇ ವಿಸರ್ಜನೆ ಮಾಡುತ್ತಾರೆ. ಪೊಲೀಸ್ ಇಲಾಖೆಯ ಇಡೀ ತಂಡ ಶ್ರದ್ಧಾ ಭಕ್ತಿಯಿಂದ ತಮ್ಮ ಸಂಬಳದ ಹಣವನ್ನು ಉಪಯೋಗಿಸಿ ಅದ್ದೂರಿಯಾಗಿ ಗಣೇಶೋತ್ಸವ ನಡೆಸುತ್ತಾರೆ, ಮೆರವಣಿಗೆ ನಡೆಸಿ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲ ಕಡೆಗಳಲ್ಲಿಯೂ ಬಿಗಿ ಬಂದೋಬಸ್ತ್‌ನಲ್ಲಿ ತೊಡಗಬೇಕಾದರೂ ತಮ್ಮ ಠಾಣೆಯಲ್ಲಿದ್ದ ಗಣಪನಿಗೆ ವಿಶೇಷ ಪೂಜೆ ಮತ್ತು ಆತಿಥ್ಯ ನೀಡುವುದನ್ನು ಮರೆಯುವುದಿಲ್ಲ. ಅಂದು ಠಾಣೆಗೆ ಭಕ್ತರನ್ನು ಕರೆದು ಪೊಲೀಸರೇ ಪಂಚಕಜ್ಜಾಯ ಹಂಚುವುದು ವಿಶೇಷ. ಅಂತೂ ಸಾಗರದ ಇತಿಹಾಸದಲ್ಲಿ ಪೊಲೀಸ್ ಗಣಪ ಇಂದಿಗೂ ಮಾಸದೇ ಹಾಗೆಯೇ ಉಳಿದಿದ್ದಾನೆ.
ಟ್ರಾೃಕ್ಟರ್ ಮೇಲೆ ನಾನೇ ಇದ್ದೆ: ಸಾಗರದ ನಗರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕವಾಗಿ ಹಿಂದು ಮಹಾಸಭಾ ಗಣಪತಿಯನ್ನು ಇಡಲಾಗುತ್ತಿತ್ತು, 1967ರಲ್ಲಿ ನಡೆದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿ. ಏಕೆಂದರೆ ಅಲ್ಲಿ ಪ್ರತಿಷ್ಠಾಪಿಸುವ ಗಣಪತಿಗೆ ನಿತ್ಯವೂ ಪೂಜೆ ಮಾಡುವ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದೆ. ಅಂದು ಮೆರವಣಿಗೆಯಲ್ಲಿ ಗಣಪತಿಯ ಪೂಜೆಗೆ ಟ್ರಾೃಕ್ಟರ್‌ನಲ್ಲಿ ಕುಳಿತುಕೊಂಡಿದ್ದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗದ್ದಲದ ಸಂದರ್ಭದಲ್ಲಿ ನಮ್ಮ ಮೇಲೂ ಕಲ್ಲು ತೂರಿ ಬಂದವು. ಆ ಘಟನೆಯನ್ನು ನಾನು ಇಂದಿಗೂ ಮರೆತಿಲ್ಲ ಎನ್ನುತ್ತಾರೆ ಸಾಗರ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಗಜಾನನ ಜೋಯಿಸ್. ಸಾಗರದ ಗಣಪತಿ ದೇವಾಲಯದ ಎದುರು ಭಾಗ ಹಿಂದೆ ತಾಲೂಕು ಆಫೀಸ್ ಇದ್ದ ಸ್ಥಳವಾಗಿತ್ತು, ಅಲ್ಲಿಗೆ ಗಣಪತಿಯನ್ನು ತಂದು ನಂತರ ಮೂರು ದಿನಗಳ ಕಾಲ ಠಾಣೆಯಲ್ಲಿಡಲಾಗಿತ್ತು. ಈಗ ಕಳೆದ 55 ವರ್ಷಗಳಿಂದ ಸಾಗರದ ಪೊಲೀಸರು ಶ್ರದ್ಧಾ ಭಕ್ತಿಯಿಂದ ಸಾಗರ ನಗರ ಠಾಣೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಗರ ನಗರ ಠಾಣೆಯಲ್ಲಿ ನಾವೆಲ್ಲರೂ ಸೇರಿ ನಿರಂತರವಾಗಿ ಪ್ರತಿ ವರ್ಷ ಗಣೇಶೋತ್ಸವವನ್ನು ಆಚರಿಸುತ್ತೇವೆ. ಗಣಪತಿಯ ಪೂಜೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತದೆ. ಎಲ್ಲರೂ ಒಟ್ಟಾಗಿ ಗಣಪತಿಯನ್ನು ಪ್ರತಿಷ್ಠಾಪಿಸುವುದಲ್ಲದೆ ಸಂಜೆ ಪೊಲೀಸರು, ಸಿಬ್ಬಂದಿ ವರ್ಗದವರು ಎಲ್ಲರೂ ಸೇರಿ ಗಣಪತಿ ಕೆರೆಯಲ್ಲಿ ವಿಸರ್ಜನೆ ಮಾಡುತ್ತೇವೆ. ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆ ತಲುಪಿಸುವ ಕೆಲಸ ಆಗಬೇಕು ಎನ್ನುತ್ತಾರೆ ಸಾಗರ ನಗರ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net