ಫಾಜಿಲ್ ಕೊಲೆ ಪ್ರಕರಣ, ಮಹತ್ವದ ಸುಳಿವು ಪತ್ತೆ: ಸಿಕ್ಕಿತು ಕೃತ್ಯಕ್ಕೆ ಬಳಸಿದ್ದ ಕಾರು...

car
ಪತ್ತೆಯಾದ ಕಾರ್​ ಸೀಟ್​ನಲ್ಲಿ ಕಂಡುಬಂದಿರುವ ಸಿಮ್​ ಕಾರ್ಡ್
Published on

ಉಡುಪಿ: ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಜು.28ರಂದು ನಡೆದ ಫಾಜಿಲ್ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಮಹೇಶ್‌ ಕುಮಾರ್‌ ಅವರನ್ನು ನೇಮಕ ಮಾಡಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಆದೇಶ ಹೊರಡಿಸಿದ ಬೆನ್ನಿಗೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವೊಂದು ಸಿಕ್ಕಿದೆ.

ಪ್ರಕರಣ ಸಂಬಂಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಕೊಲೆಯಾದ ಫಾಜಿಲ್‌ ಕುಟುಂಬಸ್ಥರು ಪೊಲೀಸ್‌ ಕಮೀಷನರ್‌ಗೆ ನೀಡಿದ್ದ ಲಿಖಿತ ಮನವಿ ಮೇರೆಗೆ ಎಸಿಪಿ ಮಹೇಶ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದು, ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಪೊಲೀಸ್‌ ಆಯುಕ್ತರು ಸೂಚಿಸಿದ್ದಾರೆ.

ಫಾಜಿಲ್ ಹತ್ಯೆಗೆ ಬಳಸಿದ್ದ ಕಾರೊಂದು ಈ ಮಧ್ಯೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಪತ್ತೆಯಾಗಿದೆ. ಪಡುಬಿದ್ರಿ ಠಾಣೆ ವ್ಯಾಪ್ತಿಯ ಕಾಜರಕಟ್ಟೆಯ ನಿರ್ಜನ ಪ್ರದೇಶದಲ್ಲಿ ಈ ಕಾರು ಪತ್ತೆಯಾಗಿದ್ದು, ಇದರೊಳಗೆ ಒಂದು ಸಿಮ್​ ಕೂಡ ಕಂಡುಬಂದಿದೆ. ಬಹುಶಃ ಲೊಕೇಷನ್ ಸುಳಿವು ತಪ್ಪಿಸಲು ಅವರು ಈ ಸಿಮ್ ಬಿಟ್ಟುಹೋಗಿರಬಹುದು ಎಂದು ಅಂದಾಜಿಸಲಾಗಿದೆ.

ಪತ್ತೆಯಾಗಿರು ಕಾರಿನ ಹಿಂಬದಿಯ ಸೀಟ್​ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ನೀರಿನ ಬಾಟಲಿ ಮತ್ತು ಚಿಲ್ಲರೆ ಹಣ ಕೂಡ ಸಿಕ್ಕಿದೆ. ಹಂತಕರು ಕೃತ್ಯಕ್ಕೆ ಬಳಸಿದ್ದ ಈ ಕಾರನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಟೋಲ್​ ಗೇಟ್ ತಪ್ಪಿಸಿಕೊಂಡು ಬಂದಿದ್ದರೇ ಎಂಬ ಅನುಮಾನವೂ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net