ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ವಾಮಾಚಾರ ವಿಡಿಯೋ ಪತ್ತೆ - ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು

mng--31 Jan Prasad athavara
Published on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟ್ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಇನ್ನಷ್ಟು ಶಕ್ತಿ ತುಂಬಲು ಪ್ರಾಣಿ ರಕ್ತ ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎಂದು ಪ್ರಸಾದ್ ಅತ್ತಾವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸ್ವಯಂಪ್ರೇರಿತ ಕೇಸು ದಾಖಲಿಸಲಾಗಿದೆ.

ಮಂಗಳೂರಿನ ಬಿಜೈಯಲ್ಲಿ ಕಲರ್ಸ್ ಯುನಿಸೆಕ್ಸ್ ಸೆಲೂನ್‌ಗೆ ಜ.23ರಂದು ನಡೆದ ದಾಳಿಯಲ್ಲಿ ಪ್ರಸಾದ್ ಅತ್ತಾವರ ಮತ್ತು ಇತರೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪ್ರಸಾದ್ ಅತ್ತಾವರ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೆನ್‌ಲ್ಯಾಬ್‌ನಲ್ಲಿ ಪಂಚರ ಸಮಕ್ಷಮದಲ್ಲಿ ಮೊಬೈಲ್ ಮೆಸೇಜ್‌ಗಳನ್ನು ಪರಿಶೀಲಿಸಿದಾಗ ಹಲವು ಅನುಮಾನಾಸ್ಪದ ವಿಷಯಗಳು ಪೊಲೀಸರಿಗೆ ಗೊತ್ತಾಗಿದೆ.

  ವಾಮಾಚಾರ ಮೂಲಕ ಶಕ್ತಿ ತುಂಬಿದರೇ?:

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸಿನಲ್ಲಿ ದೂರು ನೀಡಿ ದೇಶಾದ್ಯಂತ ಸಂಚಲನ ಮೂೂಡಿಸಿದ್ದ ಐರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾಮಾಚಾರ ಮೂಲಕ ಶಕ್ತಿ ತುಂಬುವ ಕೆಲಸವನ್ನು ಪ್ರಸಾದ್ ಅತ್ತಾವರ ಮಾಡಿದ್ದಾನೆ ಎಂದು ಶಂಕೆ ಮೂಡುವಂತಹ ಸಾಕ್ಷೃ ಪೊಲೀಸರಿಗೆ ಲಭ್ಯವಾಗಿದೆ.

ಪಾರ್ಲರ್ ದಾಳಿ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಸಾದ್ ಅತ್ತಾವರನ ಮೊಬೈಲ್‌ನಲ್ಲಿ ಸೆನ್ ಠಾಣೆಯಲ್ಲಿ ರಿಟ್ರೀಟ್‌ಗೆ ಒಳಪಡಿಸಿದ್ದರು. ಆಗ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಪರವಾಗಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸಿ ಅವರಿಗೆ ಮತ್ತಷ್ಟು ಶಕ್ತಿ ನೀಡಲು ಪ್ರಯತ್ನಿಸಿರುವ ಅಂಶ ಪತ್ತೆಯಾಗಿದೆ.

 ವಿಡಿಯೋದಲ್ಲಿ ಏನಿದೆ?

ಮೊಬೈಲ್ ಪರಿಶೀಲನೆ ವೇಳೆ ಸರಣಿ ಪ್ರಾಣಿ ಬಲಿ ನೀಡಿರುವ ವಿಡಿಯೋ ಲಭಿಸಿದೆ. ಅದರಲ್ಲಿ ಪ್ರಾಣಿ ಬಲಿಯಿಂದ ರಕ್ತವನ್ನು ದೇವತೆಗಳಿಗೆ ಅರ್ಪಿಸುವುದು ಕಂಡು ಬಂದಿದೆ. ಪ್ರಸಾದ ಅತ್ತಾವರ, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಮತ್ತು ಸುಮ ಆಚಾರ್ಯ ಅವರ ಹೆಸರುಗಳನ್ನು ನಮೂದಿಸಿರುವ ಚೀಟಿ ಮತ್ತು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೊಗಳನ್ನು ದೇವರ ಕತ್ತಿಗೆ ಹಾರವಾಗಿ ಹಾಕಿರುವ ಎರಡು ಫೋಟೊಗಳು ಸಿಕ್ಕಿವೆ. ಇದರಲ್ಲಿ ಎರಡನೇ ಫೋಟೊದಲ್ಲಿ ಅವರುಗಳ ಹೆಸರು ಮತ್ತು ಫೋಟೊಗಳ ಮೇಲೆ ರಕ್ತ ಚೆಲ್ಲಲಾಗಿದೆ. ಶಕ್ತಿ ದೇವತೆಗಳಿಗೆ ಅಭಿಷೇಕ ಮಾಡುವ ವಿಡಿಯೋದಲ್ಲಿ ಇವರುಗಳ ಹೆಸರುಗಳಿದ್ದ ಚೀಟಿಯನ್ನು ದೇವರ ಕುತ್ತಿಗೆ ಹಾರವಾಗಿ ಹಾಕಿ ಅಭಿಷೇಕ ಮಾಡುವುದು ಕಂಡು ಬಂದಿದೆ.

ಅನಂತ ಭಟ್‌ಗೆ ಹಣ ವರ್ಗಾವಣೆ

ಪ್ರಸಾದ ಅತ್ತಾವರ ಮತ್ತು ಅನಂತ ಭಟ್ ಎಂಬವರ ನಡುವೆ ವಾಮಾಚಾರ ಮಾಡುವ ಬಗ್ಗೆ ಹಲವು ವಾಯ್ಸ ಚಾಟ್ ಆ್ಯಪ್ ಸಂದೇಶಗಳು ಮತ್ತು ಫೋಟೊಗಳು ಕಂಡು ಬಂದಿವೆ. ಈ ಬಗ್ಗೆ ಅನಂತ ಭಟ್ ಅವರು ಹಲವು ವಿಡಿಯೋಗಳನ್ನು ಮತ್ತು ಫೋಟೊಗಳನ್ನು ಪ್ರಸಾದ ಅತ್ತಾವರ ಅವರಿಗೆ ಕಳುಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಸಾದ ಅತ್ತಾವರ ಅನಂತ ಭಟ್ ಅವರಿಗೆ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ಡಿ.7ರಂದು ಹಣ ತುಂಬಿರುವ ಚೀಲದ ಫೋಟೊವನ್ನು ಸುಮ ಆಚಾರ್ಯ ಅವರಿಗೆ, ಡಿ.8ರಂದು ಪ್ರಶಾಂತ ಬಂಗೇರ, ಹರ್ಷ ಮೈಸೂರು ಮತ್ತು ಅನಂತ ಭಟ್ ಅವರಿಗೆ ಕಳುಹಿಸಿರುವುದು ಅನುಮಾನ ಉಂಟು ಮಾಡಿದೆ.

ಹರ್ಷ , ಶ್ರೀನಿಧಿ, ಸ್ನೇಹಮಯಿ ಕೃಷ್ಣ, ಗಂಗರಾಜು ಅವರನ್ನು ಭೇಟಿಯಾಗಿ ಮಾತನಾಡುತ್ತಿರುವ ವಿಡಿಯೋ ಮತ್ತು ಫೋಟೋವನ್ನು ಡಿ.9ರಂದು ಮಧ್ಯಾಹ್ನ ಹರ್ಷ ಅವರು ಪ್ರಸಾದ ಅತ್ತಾವರ ಅವರಿಗೆ ಹಂಚಿಕೊಂಡಿರುವುದು ಕಂಡು ಬಂದಿದೆ. ಹಲವಾರು ಬಾರಿ ವಾಟ್ಸ್ ಆ್ಯಪ್ ಮೂಲಕ ಕಾಲ್ ಮಾತನಾಡಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್ ಸೂಚನೆ ಮೇರೆಗೆ ತನಿಖಾಧಿಕಾರಿ ಕದ್ರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸೋಮಶೇಖರ್ ಅವರು ಪ್ರಸಾದ್ ಅತ್ತಾವರ ಹಾಗೂ ಅನಂತ ಭಟ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net