ರೌಡಿ ಚಟುವಟಿಕೆ ಹತ್ತಿಕ್ಕಲು ಪೊಲೀಸ್ ಪಡೆ ಸನ್ನದ್ದ

32
Published on

ಆರ್.ಕೃಷ್ಣ ಮೈಸೂರು

ನಗರದಲ್ಲಿ ಮಿತಿ ಮೀರುತ್ತಿರುವ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರ ಪೊಲೀಸರು ಮುಂದಾಗಿದ್ದಾರೆ. ಇಷ್ಟು ದಿನ ತಣ್ಣಗೆ ಇದ್ದ ರೌಡಿ ಚಟುವಟಿಕೆ ಕಾರ್ತಿಕ್, ಗಿಲ್ಕಿ ವೆಂಕಟೇಶ್ ಕೊಲೆಯಿಂದ ಮತ್ತೆ ಹೊರಬಂದಿದೆ. ಇದರಿಂದ ಸಾಂಸ್ಕೃತಿಕ ನಗರ, ಪ್ರವಾಸಿ ಕೇಂದ್ರವಾದ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಇಂತಹ ರೌಡಿ ಚಟುವಟಿಕೆಗೆ ಕಡಿವಾಣ ಹಾಕುವವರು ಯಾರು ಇಲ್ಲವೇ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ರೌಡಿ ಚಟುವಟಿಕೆಗೆ ಕಡಿವಾಣ ಈ ಹಿಂದೆ ಪದೇ ಪದೆ ರೌಡಿಗಳ ಪರೇಡ್ ನಡೆಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು. ರಾತ್ರೋರಾತ್ರಿ ರೌಡಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡವರ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಅಲ್ಲದೇ ಮತ್ತೆ, ಮತ್ತೆ ರೌಡಿ ಚಟುವಟಿಕೆ ನಡೆಸುವ ವ್ಯಕ್ತಿಗಳನ್ನು ಗಡಿಪಾರು ಮಾಡುತ್ತಿದ್ದರು. ಹೀಗಾಗಿ ಪೊಲೀಸರ ಭಯದಿಂದ ರೌಡಿ ಚಟುವಟಿಕೆ ನಡೆಸಲು ಹಿಂಜರಿಯುತ್ತಿದ್ದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿತ್ತು.

ಆದರೆ ಈಗ ಇಂತಹ ಚಟುವಟಿಕೆಗಳಿಂದ ಪೊಲೀಸರು ನಿಷ್ಕ್ರೀಯರಾಗಿದ್ದಾರೆ. ಮುಖ್ಯಮಂತ್ರಿ, ಗಣ್ಯರು, ಜನಪ್ರತಿನಿಧಿಗಳ ಹಿಂದೆ ಓಡಾಡುತ್ತಿದ್ದಾರೆ. ಜನರಿಗೆ ರಕ್ಷಣೆ ಇಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಹೀಗಾಗಿ ನಗರದಲ್ಲಿ ಶನಿವಾರ ರಾತ್ರಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆಯಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ, ರೌಡಿ ಚಟುವಟಿಕೆಗೆ ಕಡಿವಾಣ ಹಾಕಬೇಕು. ರೌಡಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎನ್ನುವ ಸೂಚನೆ ನೀಡಿದ್ದರು.

ಮುಖ್ಯಮಂತ್ರಿಗಳ ಸೂಚನೆಯಂತೆ ನಗರದಲ್ಲಿ ಪೊಲೀಸ್ ಕಮೀಷನರ್ ಸೀಮಾಲಾಟ್ಕರ್ ನೇತೃತ್ವದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ರೌಡಿ ಚಟುವಟಿಕೆ, ಇನ್ನಿತರೆ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಎರಡು ದಿನದಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿ, ನಗರದ ಉದ್ಯಾನಗಳು, ಬಾರ್, ವೈನ್‌ಸ್ಟೋರ್‌ಗಳು, ಟೀ ಅಂಗಡಿಗಳು, ಹೋಟೆಲ್‌ಗಳು, ಬೀದಿ ಬದಿ ಅಂಗಡಿಗಳು ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಕಟ್ಟೆಚ್ಚರ ವಹಿಸಿದ್ದಾರೆ.

ಕಾರ್ಯಾಚರಣೆ ವೇಳೆ, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಅಂತಹರ ವಿರುದ್ಧ ಸಿಪಿಆರ್‌ಪಿಒ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಐಎಂವಿ ಪ್ರಕರಣಗಳನ್ನು ಸಹ ಕಟ್ಟುನಿಟ್ಟಾಗಿ ದಾಖಲಿಸಲಾಗುತ್ತಿದೆ. ಒಂದೇ ದಿನದ ಅಂತರದಲ್ಲಿ ಎರಡು ಕೊಲೆಯಾದ ದೊಡ್ಡಕೆರೆ ಮೈದಾನ, ದಸರಾ ವಸ್ತು ಪ್ರದರ್ಶನದ ಪಾರ್ಕಿಂಗ್ ಸ್ಥಳ, ಜ್ವಾಲಾಮುಖಿ ಪಾರ್ಕಿಂಗ್ ಸ್ಥಳ, ಮಕ್ಕಳ ಉದ್ಯಾನ, ಆರ್‌ಎಂಸಿ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ತಮ್ಮ ಸುತ್ತ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಅನುಮಾನಸ್ಪದ ಬೆಳವಣಿಗೆಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು. ಮೈಸೂರು ನಗರದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

ವಿವಿಧ ಪ್ರಕರಣ ದಾಖಲು

ವಿಚಾರಣೆಗೆ ಒಳಪಡಿಸಿದವರು- 405

ಸಿಪಿಆರ್‌ಪಿಒ ಅಡಿ ಪ್ರಕರಣ ದಾಖಲು - 204

ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ - 487

ತ್ರಿಬಲ್ ರೈಡಿಂಗ್ - 54

ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್‌ಪ್ಲೇಟ್, ವೀಲಿಂಗ್- 33

ವಶಕ್ಕೆ ಪಡೆದ ವಾಹನಗಳು - 59

ಚಾಮುಂಡಿ ವಿಶೇಷ ಪಡೆ

ಈ ಹಿಂದೆ ಗಣ್ಯರು ಬಂದಾಗ ರಕ್ಷಣೆ ನೀಡಲು, ರೌಡಿ ಹಾವಳಿ ಹೆಚ್ಚಾದಾಗ ಅಂತಹವರ ವಿರುದ್ಧ ಕಾರ್ಯಾಚರಣೆ ನಡೆಸಲು ಪ್ರತ್ಯೇಕವಾದ ‘ಚಾಮುಂಡಿ ವಿಶೇಷ ಪಡೆ’ಯನ್ನು ರಚನೆ ಮಾಡಲಾಗಿತ್ತು. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲೇ ಆಯ್ದ ಕೆಲವರನ್ನು ಈ ವಿಶೇಷ ಪಡೆಗೆ ನಿಯೋಜಿಸಲಾಗಿತ್ತು. ಆದರೆ ಕಮೀಷನರ್‌ಗಳು ಬದಲಾದಂತೆ ಈ ಪಡೆಯನ್ನು ವಾಪಸ್ ಪಡೆಯಲಾಯಿತು.

ಕಸ್ತೂರಿರಂಗನ್ ನಗರ ಪೊಲೀಸ್ ಕಮೀಷನರ್ ಆಗಿದ್ದಾಗ ರೌಡಿ ಚಟುವಟಿಕೆ ಮಿತಿ ಮೀರಿತ್ತು. ಇದನ್ನು ಮಟ್ಟ ಹಾಕಲು ಪ್ರಥಮ ಬಾರಿಗೆ ರೌಡಿ ಪ್ರತಿಬಂಧಕ ದಳವನ್ನು ರಚನೆ ಮಾಡುವ ಮೂಲಕ ರೌಡಿ ಚಟುವಟಿಕೆಗಳು ತಲೆ ಎತ್ತದಂತೆ ಮಾಡಲಾಗಿತ್ತು.

ತಲೆ ಎತ್ತಲು ಬಿಡುವುದಿಲ್ಲ

ನಗರಕ್ಕೆ ಪ್ರವಾಸಿಗರು ಸೇರಿದಂತೆ ಗಣ್ಯತಿ ಗಣ್ಯರು ಬರುತ್ತಿರುತ್ತಾರೆ. ಇಂತಹ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ. ಯಾವುದೇ ತರಹದ ಕಾನೂನು ಬಾಹಿರ ಕೃತ್ಯ, ರೌಡಿ ಚಟುವಟಿಕೆ ನಡೆಸಲು ಬಿಡುವುದಿಲ್ಲ. ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ. ಪೊಲೀಸರಿಗೆ ಮಾಹಿತಿ ನೀಡಿ ಜನರು ಸಹ ಸಹಕಾರ ನೀಡಬೇಕು.

ಸೀಮಾ ಲಾಟ್ಕರ್

ಪೊಲೀಸ್ ಕಮೀಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net