ಫಿಟ್ನೆಸ್ ಕಾಪಾಡಿಕೊಂಡ ಸಿಬ್ಬಂದಿಗೆ ಬಹುಮಾನ: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ

Police Flag Day Mandya
Published on

ಮಂಡ್ಯ: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕಿದೆ. ಅದೇ ರೀತಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಫಿಟ್ನೆಸ್ ಕಾಪಾಡಿಕೊಂಡ ಸಿಬ್ಬಂದಿಗೆ ಬಹುಮಾನ ವಿತರಣಾ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿವರ್ಷ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣಾ ನಡೆಸಲಾಗುತ್ತಿದೆ ಎಂದರು.

1963ರಲ್ಲಿ ಕರ್ನಾಟಕ ಪೊಲೀಸ್ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಿ ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಏ.2ರಂದು ಪೊಲೀಸ್ ಧ್ವಜ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ 2024ರಲ್ಲಿ ಪೊಲೀಸ್ ಧ್ವಜ ಮಾರಾಟ ಮಾಡಿ 22.50 ಲಕ್ಷ ರೂ ಸಂಗ್ರಹಿಸಲಾಗಿದೆ. ಇಂದಿನವರೆಗೂ ಜಿಲ್ಲಾ ಪೊಲೀಸ್ ಖಾತೆಯ ಉಳಿತಾಯ ಠೇವಣಿಯ ಮೊತ್ತ 30.25 ಲಕ್ಷ ರೂ ಉಳಿದುಕೊಂಡಿದೆ. ಈ ಹಣವನ್ನು ನಿವೃತ್ತ ಪೊಲೀಸ್ ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಧ್ವಜ ದಿನಾಚರಣೆಯಲ್ಲಿ ಸಂಗ್ರಹವಾಗುವ ಹಣವನ್ನು ಆರೋಗ್ಯ ಸೇವೆ ಒದಗಿಸುವುದರ ಜತೆಗೆ ಎಸ್‌ಎಸ್‌ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣದಲ್ಲಿ ಉನ್ನತ ಅಂಕಗಳನ್ನು ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಪ್ರತಿ ತಿಂಗಳು ಯೋಗಾಭ್ಯಾಸದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಒಟ್ಟಾರೆ ಪೊಲೀಸ್ ಇಲಾಖೆಯಿಂದ ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸೋಣ ಎಂದು ಹೇಳಿದರು.

ನಿವೃತ ಆರಕ್ಷಕ ಉಪಅಧೀಕ್ಷಕ ಎಲ್.ಕೆ.ರಮೇಶ್ ಮಾತನಾಡಿ, ಪೊಲೀಸ್ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ. ಯಾವುದೇ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ಕರ್ತವ್ಯದಲ್ಲಿ ಲೋಪ ಎಸಗಿದರೆ ಅದು ಧ್ವಜಕ್ಕೆ ಮಾಡುವ ಅವಮಾನ. ಇಲಾಖೆಗೆ ಯಾವುದೇ ರೀತಿಯ ಕಳಂಕ ತೆರೆದಂತೆ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಈ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಈ.ಗಂಗಾಧರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net