ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರ ನೋವಿಗೆ ಸ್ಪಂದಿಸಿ: ನಿವೃತ್ತ ಆರಕ್ಷಕ ಉಪನಿರೀಕ್ಷಕ ಚನ್ನಪ್ಪ ಕಿವಿಮಾತು

Police Flag Day Mandya
Published on

ಮಂಡ್ಯ: ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ಅಹವಾಲು ನೀಡಿದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ ಪ್ರಶಂಸಿಸುತ್ತಾರೆ. ಪ್ರತಿಯೊಬ್ಬ ಪೊಲೀಸರು ಸಹ ತಮ್ಮ ವೃತ್ತಿ ಜೀವನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿವೃತ್ತ ಆರಕ್ಷಕ ಉಪನಿರೀಕ್ಷಕ ಚನ್ನಪ್ಪ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಲೋಕಸಭಾ ಚುನಾವಣೆಯು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕೆಲಸದೊಂದಿಗೆ, ಠಾಣೆಯಲ್ಲಿ ಪ್ರತಿನಿತ್ಯ ನಿರ್ವಹಿಸುವ ಕೆಲಸವನ್ನು ಸಹ ಮಾಡಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತಮವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಇಲಾಖೆಗೆ ಒಳ್ಳೆಯ ಹೆಸರನ್ನು ತಂದು ಕೊಡಬೇಕು. ಸಾರ್ವಜನಿಕರ ಗಮನ ಸದಾ ಪೊಲೀಸ್ ಇಲಾಖೆಯ ಮೇಲಿರುವುದ್ದು, ಸಮವಸ್ತ್ರ ಧರಿಸಿ, ಶಿಸ್ತು ಬದ್ಧವಾಗಿ ಕೆಲಸ ನಿರ್ವಹಿಸಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನಿವೃತ್ತ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದರು.

ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ಸೇರಿದಂತೆ ಇನ್ನಿತರೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net