ಸರಗಳ್ಳರ ಮೇಲೆ ಪೊಲೀಸ್ ಫೈರಿಂಗ್

Firing
Published on

ಹುಮನಾಬಾದ್: ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ಮೇಲೆ ಪೊಲೀಶರು ಗುಂಡು ಹಾರಿಸಿ ಬಂಧಿಸಿದ ಘಟನೆ ಭಾನುವಾರ ಸಂಜೆ ಹುಮನಾಬಾದ್ ಹತ್ತಿರದ ಆರ್.ಟಿ.ಒ ಚೆಕ್ ಪೋಸ್ಟ್ ಜಂಕ್ಷನ್ ಬಳಿ ನಡೆದಿದೆ.

ಬೀದರ್ ನ ಇರಾನಿಗಲ್ಲಿಯ ಶಾದುಲ್ ಮತ್ತು ಜಾವೇದ್ ಖಾನ್ ಬಂಧಿತರು. ಹುಮನಾಬಾದ್ ಠಾಣೆಯ ಪಿಎಸ್ಐ ರವಿಕುಮಾರ ಅವರು ತಮ್ಮ ರಿವಾಲ್ವಾರ್ ನಿಂದ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಇವರಿಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನದ ಸರ ಸುಲಿಗೆ ಮಾಡಿದ್ದ ಪ್ರಕರಣವೊಂದರ ಸಂಬಂಧ ಇವರನ್ನು ಹಿಡಿಯಲು ಯತ್ನಿಸಿದಾಗ, ತಮ್ಮಲ್ಲಿದ್ದ ಚಾಕೂವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಓಡಿಹೋಗಲು ಯತ್ನಿಸಿದಾಗ ಪೊಲೀಸರ ಸರ್ವಿಸ್ ರಿವಾಲ್ವರ್ ಸದ್ದು ಮಾಡಿದೆ.

ಕಳೆದ ವಾರ ಮನ್ನಾಎಖ್ಖೇಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ನಡೆದಿತ್ತು. ಈ ಕುರಿತು ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು. ಭಾನುವಾರ ಸಂಜೆ ಮಂಗಲಗಿ ಟೋಲ್ ಪ್ಲಾಜಾದಿಂದ ಸಂಶಯಾಸ್ಪದವಾಗಿ ಇಬ್ಬರು ಬೈಕ್ ಮೇಲೆ ಹುಮ ನಾಬಾದ್ ಕಡೆ ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಪಿಎಸ್ಐ ರವಿಕುಮಾರ, ಕಿರಣಕುಮಾರ, ಸಿಬ್ಬಂದಿ ನವೀನ್, ಭಗವಾನ, ಮಲ್ಲಿಕಾರ್ಜುನ ಕಾರ್ಯಪ್ರವೃತ್ತರಾಗಿ ಆರ್.ಟಿ.ಒ ಕ್ರಾಸ್ ಬಳಿ ಇವರಿಗೆ ಸಿನಿಮೀಯ ಶೈಲಿಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ತಡೆದು ಹಿಡಿದು ವಿಚಾರಣೆ ಮಾಡುವ ಹಂತದಲ್ಲೇ ಇವರು ತಮ್ಮಲ್ಲಿದ್ದ ಚಾಕೂವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ಗಂಭೀರತೆ ಅರಿತ ಪಿಎಸ್ಐ ರವಿಕುಮಾರ ತಕ್ಷಣ ಗುಂಡು ಹಾರಿಸಿ ಇಬ್ಬರಿಗೆ ಹಿಡಿದಿದ್ದಾರೆ. ಇವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಇವರಲ್ಲಿ ಪೊಲೀಸರ ನಕಲಿ ಗುರುತಿನ ಚೀಟಿ ಸಹ ಸಿಕ್ಕಿವೆ ಎನ್ನಲಾಗುತ್ತಿದ್ದು, ಖಾಕಿಧಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಡಾ. ಗೋಪಾಲ್ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆ ತಂಡದ ಸಾಹಸವನ್ನು ಶ್ಲಾಘಿಸಿದರು. ಈ ಘಟನೆಯಲ್ಲಿ ಗಾಯಗೊಂಡವರಿಗೆ ಧೈರ್ಯ ತುಂಬಿದರು. ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net