ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿ ಕೊಲೆ ಆರೋಪಿ; ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು...

Firing
Published on

ಶಿವಮೊಗ್ಗ: ಜೋಡಿ ಕೊಲೆ ಆರೋಪಿ, ಬೆಂಗಳೂರು ಮೂಲದ ಭರತ್​ನನ್ನು ಬಂಧಿಸಿ ಠಾಣೆಗೆ ಕರೆ ತರುವಾಗ, ಆತ ಪೊಲೀಸರ ಮೇಲೇ ಹಲ್ಲೆ ನಡೆಸಿದ್ದ. ಬಳಿಕ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅವನ ಕಾಲಿಗೆ ಗುಂಡು ಹಾರಿಸಿ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಸಾಗರ ಹೊರವಲಯದಲ್ಲಿ ಆತ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಡಿಸಿಐಬಿ ಇನ್​ಸ್ಪೆಕ್ಟರ್ ಕುಮಾರಸ್ವಾಮಿ ಆತನ ಕಾಲಿಗೆ ಗುರಿ ಇಟ್ಟು ಗುಂಡು ಹಾರಿಸಿದ್ದಾರೆ. ಆರೋಪಿ ಭರತ್​ ಹಾಗೂ ಆತನಿಂದ ಗಾಯಗೊಂಡ ಪೊಲೀಸರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಗರದ ಹಳೇ ಇಕ್ಕೇರಿಯ ಶ್ರುತಿ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದಾಗ ಬೆಂಗಳೂರಿನ ಅಂದ್ರಹಳ್ಳಿ ತಿಗಳರಪಾಳ್ಯದ ಭರತ್ ಪರಿಚಯವಾಗಿದೆ. ಬಳಿಕ ಪರಿಚಯ ಸಲಿಗೆಯಾಗಿ ಪ್ರೀತಿಗೆ ತಿರುಗಿದೆ. ಆದರೆ ಇದಕ್ಕೂ ಮೊದಲು ಊರಿನಲ್ಲಿ ಶ್ರುತಿಯ ಪಕ್ಕದ ಮನೆಯ ಪ್ರವೀಣ್ ತನ್ನ ಮದುವೆಗೂ ಮುನ್ನ ಶ್ರುತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಕಾರಣ ಹಾಗೂ ಆತನೊಂದಿಗೆ ಆಕೆ ಇದ್ದ ಫೋಟೋಗಳನ್ನೂ ನೋಡಿದ್ದ ಭರತ್​, ಪ್ರವೀಣ್​ ಆಗಾಗ ಶ್ರುತಿಗೆ ಕರೆ ಮಾಡಿ ಮಾತನಾಡುತ್ತಿದ್ದು ಗೊತ್ತಾಗಿ​, ಪ್ರವೀಣ್​ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನೂ ಅಕ್ಟೋಬರ್ 12ರಂದು ಕೊಲೆ ಮಾಡಿದ್ದ. ಪ್ರವೀಣ್​ ಕೊಲೆಗೆ ಶ್ರುತಿಯೇ ಸಾಥ್ ನೀಡಿದ್ದಳು.

ಇದೀಗ ಜೋಡಿ‌ ಕೊಲೆ ಮಾಡಿದ್ದ ಭರತ್ ಹಾಗೂ ಶ್ರುತಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದ ಪತ್ತೆಗಾಗಿ ಡಿಸಿಐಬಿ ಇನ್​ಸ್ಪೆಕ್ಟರ್​ ಕುಮಾರಸ್ವಾಮಿ, ಮಹಿಳಾ ಠಾಣೆ ಇನ್​ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ವಿನೋಬನಗರ ಪಿಎಸ್ಐ ಉಮೇಶ್ ಕುಮಾರ್ ನೇತೃತ್ವದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್ ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net