ಪೊಲೀಸರಿಂದ ದನಗಳ್ಳರ ಕಾರಿಗೆ ಗುಂಡು: ಕರು ರಕ್ಷಣೆ

13 ckm 14
Published on

ಚಿಕ್ಕಮಗಳೂರು: ದನಗಳ್ಳರ ಕಾರಿನ ಮೇಲೆ ಗುಂಡು ಹಾರಿಸಿದ ಪೊಲೀಸರು ಅಪಹೃತವಾಗುತ್ತಿದ್ದ ಕರುವನ್ನು ರಕ್ಷಿಸಿದ ಘಟನೆ ತರೀಕೆರೆ ತಾಲೂಕು ಲಿಂಗದಹಳ್ಳಿ ಬಳಿ ನಡೆದಿದೆ.

ಗುರುವಾರ ರಾತ್ರಿ ದನಗಳ್ಳರು ಪಿಳ್ಳೇಬೀರನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಇನ್ನೋವಾ ಕಾರಿನಲ್ಲಿ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಕರುವೊಂದನ್ನು ಅಪಹರಿಸುತ್ತಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಸುಳಿವು ಆಧರಿಸಿ 12 ಮಂದಿ ಪೊಲೀಸರು ಇಲಾಖೆಯ ವಾಹನದಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಪಿಎಸ್‍ಐ ರಫೀಕ್ ಆತ್ಮರಕ್ಷಣೆ ಸಲುವಾಗಿ ಆರೋಪಿಗಳ ಕಾರಿನ ಮೇಲೆ ಐದು ಸುತ್ತು ಗುಂಡು ಹಾರಿಸಿದರು. ಕಾರಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

ಘಟನೆಯಿಂದ ಬೆಚ್ಚಿಬಿದ್ದ ಖದೀಮರು ಕಾರು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಕಾರಿನಲ್ಲಿದ್ದ ಕರುವನ್ನು ರಕ್ಷಿಸಿದ್ದಾರೆ. ಕಾರಿನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಆದರೆ ಆರೋಪಿಗಳು ಮಂಗಳೂರು ಮೂಲದವರು ಎಂಬ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net