ಹುಬ್ಬಳ್ಳಿ: ಈಗಾಗಲೇ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಏರಿಯಾ ಡಾಮಿನೇಶನ್ ಕಾರ್ಯಾಚರಣೆ ಆರಂಭಿಸಿರುವ ನಗರ ಪೊಲೀಸರು ಇದೀಗ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಅಂತಾರಾಜ್ಯ ಕಳ್ಳನ ಕಾಲಿಗೆ ಗುಂಡು ಹಾರಿಸುವ ಮೂಲಕ ಖದರ್ ತೋರಿಸಿದ್ದಾರೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಅಂತಾರಾಜ್ಯ ಕಳ್ಳತನ ಆರೋಪಿ, ಮುಂಬೈ ಮೂಲದ ಫರ್ಹಾನ್ ಅಹ್ಮದ್ ಜತೆಯಲ್ಲಿ ಆತನ ತಂಡದವರನ್ನು ಹಿಡಿಯಲು ಹೋದಾಗ ತಿರುಗಿಬಿದ್ದ ಫರ್ಹಾನ್ ಎಂಬಾತನ ಕಾಲಿಗೆ ಶೂಟ್ ಮಾಡಲಾಗಿದೆ.
ಹೈದರಾಬಾದ್, ಕಲಬುರಗಿ, ಅಹ್ಮದ್ನಗರ, ಸೂರತ್ ಮತ್ತು ಮುಂಬೈನಲ್ಲಿ ರಾಬರಿ ಹಾಗೂ ಕೊಲೆ ಯತ್ನ ಪ್ರಕರಣಗಳು ಈತನ ಮೇಲಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಮುಂಬೈ ಮೂಲದ ಫರ್ಹಾನ್ ಶೇಖ್ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಶ್ವಾಪುರದಲ್ಲಿ ಜುವೆಲರಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ರಾತ್ರಿ ಈತನನ್ನು ಬಂಧಿಸಿರುವ ಪೊಲೀಸರು ಶುಕ್ರವಾರ ಈತನ ಸಹಚರರನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಹುಬ್ಬಳ್ಳಿಯ ಹೊರವಲಯದ ಗಾಮನಗಟ್ಟಿ ತಾರಿಹಾಳ ರಸ್ತೆ ಕ್ರಾಸ್ ಬಳಿಯಲ್ಲಿ ಆರೋಪಿ ಫರ್ಹಾನ್ ಶೇಖ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಆತ್ಮರಕ್ಷಣೆಗೆ ಮುಂದಾದರು. ಪಿಎಸ್ಐ ಕವಿತಾ ಮಾಡಗ್ಯಾಳ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರು. ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡು ತಾಗಿದ ಕೂಡಲೇ ಕೆಳಗೆ ಬಿದ್ದ ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಅವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಶ್ವಾಪುರ ಪಿಐ ಕೆ.ಎಸ್. ಹಟ್ಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪರಾರಿಯಾಗುವಾಗ ಗುಂಡೇಟು:
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಳ್ಳತನ ಆರೋಪಿ ಹಾಗೂ ಕಾರ್ಯಾಚರಣೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಂತಾರಾಜ್ಯ ಕುಖ್ಯಾತ ದರೋಡೆಕೋರ ಫರಾನ್ ಶೇಖ್ ಪರಾರಿಯಾಗಲು ಯತ್ನಿಸಿದಾಗ ಫೈರಿಂಗ್ ಮಾಡಲಾಗಿದೆ. ನಮ್ಮ ಸಿಬ್ಬಂದಿಗೂ ಗಾಯಗಳಾಗಿವೆ ಎಂದರು.
ಫರಾನ್ ಮೇಲೆ ಫೈರಿಂಗ್ ಮಾಡಲಾಗಿದೆ. ಪಿಎಸ್ಐ ಕವಿತಾ ಮಾಡಗ್ಯಾಳ, ಸಿಬ್ಬಂದಿ ಮಹೇಶ, ಸುಜಾತಾ ಅವರಿಗೂ ಗಾಯವಾಗಿವೆ ಎಂದರು.
ಪಿಎಸ್ಐ ಕವಿತಾ ಮಾಡಗ್ಯಾಳ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಆರೋಪಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಈ ಟನೆ ನಡೆದಿದೆ. ಫರಾನ್ ಶೇಖ್ ವಿರುದ್ಧ ವಿವಿಧ ರಾಜ್ಯದಲ್ಲಿ 15 ಪ್ರಕರಣಗಳಿವೆ ಎಂದು ವಿವರಿಸಿದರು.