

ಮಡಿಕೇರಿ: ಪೊಲೀಸರ ಕರ್ತವ್ಯ ನಿಷ್ಠೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಸಮಾಜದ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಪೊಲೀಸರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಮರೆಯಬಾರದು. ಸಮಾಜದ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಸ್ಮರಿಸುವಂತಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ೨೦೨೩-೨೪ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ಓದಿದರು. ಕರ್ನಾಟಕ ರಾಜ್ಯ ಐವರು ಸೇರಿದಂತೆ ಒಟ್ಟು ದೇಶದಲ್ಲಿ ೨೧೬ ಪೊಲೀಸರು ಹುತಾತ್ಮರಾಗಿರುವ ಪೊಲೀಸರ ಹೆಸರನ್ನು ಓದಿದರು.
ಪೊಲೀಸ್ ಕವಾಯತು ಸಿಬ್ಬಂದಿಗಳು ಮೂರು ಸುತ್ತು ವಾಲಿ ಫೈರಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಗಣ್ಯರು ಸೇರಿದಂತೆ ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು. ಹುತಾತ್ಮರ ಸ್ಮರಣಾರ್ಥ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು. ಬಳಿಕ ರಿವಾಲಿ ಕವಾಯತು ಸಿಬ್ಬಂದಿಗಳು ವಂದಿಸಿದರು. ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು. ಸಿದ್ದೇಶ್ ತಂಡದವರು ವಾದ್ಯದೊಂದಿಗೆ ರಾಷ್ಟ್ರಗೀತೆ ನುಡಿಸಿದರು.
ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಡಿವೈಎಸ್‌ಪಿಗಳ ಪರವಾಗಿ ಮೋಹನ್ ಕುಮಾರ್, ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕರಾದ ಚೆನ್ನನಾಯಕ, ವೈಯರ್‌ಲೆಸ್ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಮಾಜಿ ಸೈನಿಕರ ಪರವಾಗಿ ಏರ್‌ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಇತರರು ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.