

ಕೊಳ್ಳೇಗಾಲ: ಪೊಲೀಸ್ ಜನರೊಂದಿಗೆ ಬೆರೆಯಬೇಕೆಂಬುದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಹೇಳಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚಾಮರಾಜನಗರ ಜಿಲ್ಲಾ ಪೊಲೀಸ್ ಕೊಳ್ಳೇಗಾಲ ಉಪವಿಭಾಗ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆ, ಇ-ಬೀಟ್ ವ್ಯವಸ್ಥೆ ಇದೆ. ಇದೀಗ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಪರಿಣಮಕಾರಿಯಾಗಿ ಕೆಲಸ ಮಾಡಲಿದೆ. ಪಟ್ಟಣದ ಪ್ರತಿ ವಾರ್ಡ್ ಹಾಗೂ ತಾಲೂಕಿನ ಪ್ರತಿ ಹಳ್ಳಿಯ ಸಮಸ್ಯೆಗಳ ಮಾಹಿತಿ ಸಿಗಲಿದೆ. ಜನರ ಕಷ್ಟಗಳಿಗೆ ಸ್ಪಂದಿಸಲು ಅನುಕೂಲವಾಗಲಿದೆ. ಪೊಲೀಸರಿಗೆ ಇದರಿಂದ ಅಧಿಕ ಕೆಲಸವಾಗಲಿದೆ. ಪ್ರತಿ ಹಳ್ಳಿಯಲ್ಲೂ ಸಮೂಹ ರಚಿಸಿಕೊಂಡು ಮನೆ ಮನೆಗೂ ತಲುಪಬೇಕು ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಮಾತನಾಡಿ, ಮನೆ ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಿಂದ ಪ್ರತಿ ಮನೆಗಳಿಗೂ ಪೊಲೀಸ್ ಸಂಪರ್ಕ ಸಿಗಲಿದೆ. ದೂರು ನೀಡಲು ಹಿಂಜರಿಯುವವರು, ಅಸಕ್ತರು, ವಯೋವೃದ್ಧರು ಮುಕ್ತವಾಗಿ ತಮ್ಮ ದೂರನ್ನು ಮನೆಗೆ ಬಂದ ಪೊಲೀಸರಿಗೆ ತಿಳಿಸಬಹುದಾಗಿದೆ. ಚಾಮರಾಜನಗರ ಎಸ್ಪಿ ಡಾ.ಬಿ.ಟಿ. ಕವಿತಾ ಅವರು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ ಎಂದರು.
ಬಳಿಕ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಬಗ್ಗೆ ತರಬೇತಿಯನ್ನು ನೀಡಲಾಯಿತು. ಡಿವೈಎಸ್ಪಿ ಎಂ.ಧಮೇಂದ್ರ, ಸಿಪಿಐ ಶಿವಮಾದಯ್ಯ, ಉಪವಿಭಾಗ ಮಟ್ಟದ ವಿವಿಧ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು, ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ ಇದ್ದರು.