

ಹರಿಹರ: ನಗರಸಭೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಫ್ಲೆಕ್ಸ್ಬೋರ್ಡ್ ಅಳವಡಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಪೊಲೀಸರಿಗೆ ಸೂಚಿಸಿದರು.
ತಾಲೂಕಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿವೃದ್ಧಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಫ್ಲೆಕ್ಸ್ ಬೋರ್ಡ್ ಅಳವಡಿಸಿ ಪ್ರಚಾರ ಪಡೆಯಲು ಅಭ್ಯಂತರವಿಲ್ಲ, ಆದರೆ ಎಲ್ಲರೂ ಕಡ್ಡಾಯವಾಗಿ ನಗರಸಭೆಗೆ ನಿಗದಿತ ಶುಲ್ಕ ಪಾವತಿಸಿ, ಅನುಮತಿ ಪಡೆಯಬೇಕು ಎಂದರು.
ನಗರಸಭಾ ಸದಸ್ಯೆ ಡಿ. ಲಕ್ಷ್ಮೀ ಮೋಹನ್ ಅವರು ಫ್ಲೆಕ್ಸ್ ಹಾವಳಿ ಕುರಿತು ತಿಳಿಸಿದಾಗ ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಯಾರದ್ದೇ ಆಗಲಿ ಅನಧಿಕೃತ ಫ್ಲೆಕ್ಸ್ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ಎಂದು ನಗರ ಠಾಣೆ ಇನ್ಸ್ಸ್ಪೆಕ್ಟರ್ ದೇವಾನಂದ್ ಅವರಿಗೆ ಖಡಕ್ ಸೂಚನೆ ನೀಡಿದರು.
ಮಾ.18 ರಿಂದ 22ರವರೆಗೆ ನಡೆಯುವ ಹರಿಹರ ಗ್ರಾಮದೇವತೆ (ಊರಮ್ಮ) ಉತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಾ.14 ರಂದು ಬೆಳಗ್ಗೆ 7ಕ್ಕೆ ಹರಿಹರದಲ್ಲಿ ಸಂಚಾರ ನಡೆಸಿ ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿದರು.
ನಗರದ ನಾಲ್ಕು ದಿಕ್ಕಿನಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಪೋಟೋಗಳನ್ನು ರವಾನಿಸಬೇಕೆಂದು ಪಿಡಬ್ಲುಡಿ ಇಂಜಿನಿಯರ್ಗೆ ಹೇಳಿದರು.
ಉತ್ಸವಕ್ಕಾಗಿ ಹೆಚ್ಚುವರಿ ನೀರಿನ ಟ್ಯಾಂಕರ್ ತರಿಸಬೇಕು, ಅಕ್ಕಪಕ್ಕದ ನಗರ- ಪಟ್ಟಣಗಳಿಂದ ಪೌರಕಾರ್ವಿುಕರನ್ನು ಕರೆಸಬೇಕು. ಅಗ್ನಿಶಾಮಕ ವಾಹನ ವ್ಯವಸ್ಥೆ, ಗ್ರಾಮದೇವತೆ ದೇವಸ್ಥಾನ ಹಾಗೂ ಚೌಕಿ ಮನೆ, ಮೆರವಣಿಗೆ ಸಾಗುವ ಜಾಗಗಳಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಸೊಳ್ಳೆ ನಿವಾರಕ ಫಾಗಿಂಗ್ ಮಾಡಿಸಲು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಪ್ರವೇಶಿಸುವ ನಾಲ್ಕು ದಿಕ್ಕಿನಲ್ಲಿ ಹೊರವಲಯದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ, ಟ್ರಾಫಿಕ್ ಆಗದಂತೆ ಬ್ಯಾರಿಕೇಡ್ ಅಳವಡಿಕೆ, ಮಫ್ತಿ ವೇಷದಲ್ಲಿ ಸಿಬ್ಬಂದಿ ನಿಯೋಜನೆ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇನ್ಸ್ಸ್ಪೆಕ್ಟರ್ ದೇವಾನಂದ್ ಅವರಿಗೆ ಹೇಳಿದರು.
ನಗರದಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜು ಇರಬೇಕು. ಕೆಟ್ಟಿರುವ ಪರಿವರ್ತಕ, ಕೇಬಲ್ಗಳನ್ನು ದುರಸ್ತಿ ಮಾಡಿಕೊಳ್ಳಬೇಕು, ವಿದ್ಯುತ್ ಅವಘಡಗಳು ನಡೆದರೆ ನಿಮ್ಮನ್ನೇ ಹೊಣೆಯಾಗಿಸುವುದಾಗಿ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ, ಸದಸ್ಯರಾದ ಎ. ವಾಮನಮೂರ್ತಿ, ದಾದಾ ಖಲಂದರ್, ಆಟೋ ಹನುಮಂತಪ್ಪ, ಕೆ.ಬಿ. ರಾಜಶೇಖರ್, ಸೈಯದ್ ಅಬ್ದುಲ್ ಅಲೀಂ, ಎಂ.ಆರ್. ಮುಜಮ್ಮಿಲ್, ಎಸ್.ಎಂ. ವಸಂತ್, ವಿರುಪಾಕ್ಷಪ್ಪ, ರಜನಿಕಾಂತ್, ನಾಗರತ್ನಮ್ಮ, ಉಷಾ ಮಂಜುನಾಥ್, ಸುಮಿತ್ರಾ ಮರಿದೇವ, ರತ್ನ ಉಜ್ಜೇಶ್, ಷಹಜಾದ್ ಸನಾಉಲ್ಲಾ, ಎಂ.ಎಸ್. ಬಾಬುಲಾಲ್, ಕೆ.ಜಿ. ಸಿದ್ದೇಶ್, ಇಬ್ರಾಹಿಂ, ಶಾಹೀನಾಬಾನು, ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ಮಹಾಂತೇಶ್, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಒಂದು ಕಾಮಗಾರಿ ಮಾಡಿ 4 ಬಿಲ್ ಪಡೆದಂತಹ ಪ್ರಕರಣದಲ್ಲಿ ತಪ್ಪಿತಸ್ಥ ನಗರಸಭೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ನಗರ ಠಾಣೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದರು. ಹೀಗಾಗಿ ದೂರು ದಾಖಲಿಸಿಕೊಳ್ಳಿ. ತಪ್ಪಿದಲ್ಲಿ ನಾನೇ ದೂರು ನೀಡುತ್ತೇನೆ ಎಂದಾಗ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಷ್ಟ್ರೀಯ ಲೋಕ್ ಅದಾಲತ್ 8ಕ್ಕೆ: ಮಾ.8 ರಂದು ಎಲ್ಲ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನಗರಸಭೆ ಸೇರಿ ವಿವಿಧ ಇಲಾಖೆಯವರು, ವಕೀಲರು, ಸಾರ್ವಜನಿಕರು ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೋರಿದರು. ಅಲ್ಲದೇ ನಗರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಶಾಸಕರ ಮತ್ತು ಸದಸ್ಯರ ಆಶಯದಂತೆ ತಿಂಗಳಿಗೊಮ್ಮೆ ನಗರಸಭೆಯಲ್ಲಿ ಅಭಿವೃದ್ಧಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.