ಪೊಲೀಸ ಹುತಾತ್ಮರ ದಿನಾಚರಣೆ! ಸಂವಿಧಾನದ ಧ್ಯೇಯೋದ್ದೇಶ ಪಾಲನೆಯಲ್ಲಿ ಪೊಲೀಸ ಇಲಾಖೆ ಪಾತ್ರ ಪ್ರಮುಖ: ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ

Wh
Published on

ಗದಗ: ಸಂವಿಧಾನದ ಧ್ಯೇಯೋದ್ದೇಶ ಸರಿಯಾಗಿ ಪಾಲನೆಗೊಳ್ಳುವಲ್ಲಿ ಪೊಲೀಸ ಇಲಾಖೆ ಪಾತ್ರ ಪ್ರಮುಖವಾಗಿದೆ. ಪೊಲೀಸರ ತ್ಯಾಗ, ಬಲಿದಾನ, ಸಾಹಸ ಸ್ಮರಣೀಯವಾದುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಅವರು ಹೇಳಿದರು.

ನಗರದ ಜಿಲ್ಲಾ ಪೊಲೀಸ ಕಚೇರಿ ಆವರಣದಲ್ಲಿ ಗದಗ ಜಿಲ್ಲಾ ಪೊಲೀಸ ಇಲಾಖೆ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಏರ್ಪಡಿಸಿದ ಪೊಲೀಸ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.      

ಪೊಲೀಸ ಇಲಾಖೆಯ ಪ್ರತಿ ಹಂತದ ಅಧಿಕಾರಿ ಸಿಬ್ಬಂದಿಗಳು ಸಹ ಹಗಲಿರುಳೆನ್ನದೇ ನಿರಂತರ ಕರ್ತವ್ಯ ನಿರ್ವಹಿಸುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಪೊಲೀಸ ಇಲಾಖೆ ಜನಸ್ನೇಹಿ ಪೊಲೀಸ ಆಗುವಲ್ಲಿ ದಾಪುಗಾಲಿಟ್ಟಿದೆ. ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ಸ್ಮರಣೆ ಮಾಡಲು ಪೊಲೀಸ ಹುತಾತ್ಮ ದಿನಚರಣೆ ಹಮ್ಮಿಕೊಳ್ಳಲಾಗಿದ್ದು ಪ್ರಾಣಾರ್ಪಣೆ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸೋಣ ಎಂದರು.  

ಪೊಲೀಸರಿಲ್ಲದ ಸಮಾಜ ಊಹಿಸಲು ಸಹ ಇಂದು ಅಸಾಧ್ಯ.ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ಹಾಗೂ ವಂಚನೆ, ದರೋಡೆ, ಹಲ್ಲೆ, ಅಪರಾಧ ನಿಯಂತ್ರಣದಲ್ಲಿ ಇಲಾಖೆ ಸದಾ ಮುಂದು ಇದೆ ಎಂದರು. ಕರ್ನಾಟಕದ ಜನರು ನೆಮ್ಮದಿ ಜೀವನ ಸಹಬಾಳ್ವೆಯಿಂದ ಮುನ್ನಡೆಯಲು ಪೊಲೀಸ್ ಇಲಾಖೆ ತನ್ನದೇ ಕೊಡುಗೆ ನೀಡಿದೆ ಎಂದು ಬಣ್ಣಿಸಿದರು.  

2001 ರಲ್ಲಿ ದೆಹಲಿಯ ಸಂಸತ್ ಭವನದಲ್ಲಿ ನಡೆದ ದಾಳಿಯನ್ನು ಸಮರ್ಥವಾಗಿ ಪೊಲೀಸ ಇಲಾಖೆ ತಡೆಯುವಲ್ಲಿ ಯಶಸ್ವಿಯಾಯಿತು. ಅದೇ ರೀತಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿ ನಿಯಂತ್ರಿಸುವಲ್ಲಿ ಪೊಲೀಸ ಪಾತ್ರ ಅಪಾರವಾಗಿದೆ. ಇತ್ತೀಚೆಗೆ  ಜಗತ್ತೇ ದಿಗ್ಬ್ರಾಂತಗೊಳಿಸಿದ ಕೋವಿಡ್ ಸೋಂಕು ನಿಯಂತ್ರಣದಲ್ಲಿಯೂ ಪೊಲೀಸ ಇಲಾಖೆ ಸೇವೆ ಮರೆಯಲಾಗದು ಎಂದರು.  

ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಅವರು ಮಾತನಾಡಿ ಭಾರತ ಚೀನಾ ಗಡಿಯಲ್ಲಿ ಚೀನಾ ಸೇನೆಯಿಂದ ನಡೆದ ದಿನಾಂಕ 21-10-1959 ರಂದು ನಡೆದ ದಾಳಿಯಲ್ಲಿ ಹತ್ತಕ್ಕೂ ಅಧಿಕ ದೇಶದ ಪೊಲೀಸರು ಹುತಾತ್ಮರಾದರು. ಇದರ ನೆನಪಿಗಾಗಿ ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಪೊಲೀಸ ಹುತಾತ್ಮ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಶದಲ್ಲಿ 189 ಪೊಲೀಸ ಅಧಿಕಾರಿ ಸಿಬ್ಬಂದಿಗಳು 223 ರಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದು ಇದರಲ್ಲಿ ಗದಗ ಜಿಲ್ಲೆಯ ನಾಲ್ಕು ಪೊಲೀಸರು ಸೇರಿದ್ದಾರೆ ಎಂದರು.

ಪೊಲೀಸ ಹುತಾತ್ಮರು:  ಜಿಲ್ಲೆಯ ಮುಂಡರಗಿ ಪೊಲೀಸ ಠಾಣೆಯ ನಿಂಗಪ್ಪ ಹಲವಾಗಲಿ,  ಮಹೇಶ ವಸ್ತ್ರದ,  ಕೊಟ್ರಪ್ಪ ಬಂಡಗಾರ,  ಬೆಟಗೇರಿ ಬಡಾವಣೆ ಪೊಲೀಸ ಠಾಣೆ ಬಸವರಾಜ ಗುಡ್ಡದ ಅವರುಗಳು ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ  ಮಾಡಿದ್ದಾರೆ ಎಂದು ಅವರುಗಳನ್ನು  ಜಿಲ್ಲಾ  ಪೊಲೀಸ ವರಿಷ್ಟಾದಿಕಾರಿ ಬಿ.ಎಸ್. ನೇಮಗೌಡ ಅವರು ಈ ಸಂದರ್ಭದಲ್ಲಿ  ಸ್ಮರಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು. ಡಿ.ಎಸ್.ಪಿ.ಗಳಾದ ಮಡಿವಾಳಪ್ಪ ಸಂಕದ, ಪ್ರಭುಗೌಡ ತೀರದಳ್ಳಿ, ತಿಮ್ಮರಾಯ ಪಾಟೀಲ, ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.  

ಹೋಮ್ ಗಾರ್ಡ ಕಮಾಂಡರ್ ವಿಶ್ವನಾಥ,  ಪೊಲೀಸ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಎನ್.ಎ. ಹಿಪ್ಪರಗಿ, ಪೊಲೀಸ ಇನ್ಸಪೆಕ್ಟರ್ ಯು.ಎನ್.ಪಾಟೀಲ, ಪಿ.ಎಸ್.ಐಗಳಾದ ಎನ್.ಕೆ. ಚುಲಕಟ್ಟಿ, ಶ್ರಿಮತಿ ಕೋರಬಾಳ, ಆರ್.ಎಸ್.ಐ. ಮಾರುತಿ ದಳವಾಯಿ, ಎ.ಎಸ್.ಐ. ಎಸ್.ಪಿ. ಕಡುಗಿನ, ಎ.ಆರ್.ಎಸ್.ಐ. ಬಿ.ಎಫ್. ಹಳ್ಳಿಗುಡಿ, ಡಿ.ಎಸ್. ಬಾರಕೇರ, ಜೆ.ಬಿ. ಕೋಸಂಬನವರ, ಎಸ್.ವೈ. ಗಾಣಿಗೇರ, ಪುಷ್ಪನಮನ ಸಲ್ಲಿಸಿದರು.

ನಿವೃತ್ತ ಪೊಲೀಸ ಅಧಿಕಾರಿಗಳ ಪರವಾಗಿ ನಿವೃತ್ತ ಆರ್.ಎಸ್.ಐ. ಎ.ಬಿ. ಬಸನಗೌಡ , ಪತ್ರಿಕಾ ಮಾಧ್ಯಮದ ಪರವಾಗಿ ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ಛಾಯಾಗ್ರಾಹಕ ರಾಮುವಗ್ಗಿ ಗೌರವ ಸಮರ್ಪಿಸಿದರು.  

ಸಂಘ ಸಂಸ್ಥೇಗಳ ಸಮುದಾಯಗಳ ಪರವಾಗಿ ಎಸ್.ಎನ್.ಬಳ್ಳಾರಿ , ಚೇಂಬರ್ ಆಫ್ ಕಾಮರ್ಸ ಪರವಾಗಿ ಮುನವಳ್ಳಿ, ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ಬಾಷಾಸಾಬ ಮಲ್ಲಸಮುದ್ರ, ನಿವೃತ್ತ ಸೈನಿಕರ ಪರವಾಗಿ ಬೆಟ್ಟಪ್ಪ ಕಂಬಾರ, ರೈತ ಸಂಘಟನೆಗಳ ಪರವಾಗಿ ವಿಜಯಕುಮಾರ ಸಂಕದ, ಅಕ್ಬರಸಾಬ ಹಾಗೂ ಜಿಲ್ಲೆಯ ಹುತಾತ್ಮ ಪೊಲೀಸರ ಕುಟುಂಬಸ್ಥರು ಹುತಾತ್ಮ ಪೊಲೀಸರಿಗೆ ಪುಷ್ಪ ಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.

ಪರೇಡ್ ಕಮಾಂಡರ್ ಶಂಕರಗೌಡ ಚೌಧರಿ ಅವರು ಶಿಸ್ತು ಬದ್ಧ ಪೊಲೀಸ ಪರೇಡ್ ನಡೆಸಿಕೊಟ್ಟರು, ಎನ್.ಪಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net