

ಹುಬ್ಬಳ್ಳಿ: ಮಹಾನಗರ ಪೊಲೀಸ್ ಆಯುಕ್ತಾಲಯದ 2016ನೇ ಸಾಲಿನ ನಗರ ಸಶಸ್ತ್ರ ಮೀಸಲು ಪಡೆಯ 7ನೇ ವರ್ಷದ ಸೇವಾ ಸಂಭ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಗರದಲ್ಲಿ ಜರುಗಿತು.
ಪೊಲೀಸರೆಂದರೆ ಕಠೋರ ಹೃದಯದವರು ಎನ್ನುವ ಮನಸುಗಳ ನಡುವೆ ಪೊಲೀಸರು ಸಮಾಜಮುಖಿ ಕಾರ್ಯಕ್ರಮ ರೂಪಿಸಿ ಅಂಧರು, ವಿಕಲಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ಪಾಠೋಪಕರಣ ಮತ್ತು ವೃದ್ಧಾಶ್ರಮದ ಹಿರಿಯ ಜೀವಗಳಿಗೆ ವೈದ್ಯಕಿಯ ನೆರವು ನೀಡಿ ಮೆಚ್ಚುಗೆ ಗಳಿಸಿದರು.
ಹುಬ್ಬಳ್ಳಿ ಧಾರವಾಡ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಆಯುಕ್ತ ರವೀಶ ಸಿ.ಆರ್. ಅವರು ವಿಕಲಚೇತನ ಮತ್ತು ವೃದ್ಧಾಶ್ರಮದ ಸಹೃದಯ ಮನಸುಗಳಿಗೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಪೊಲೀಸರು ಮನಸಾಕ್ಷಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಮನಃಸಾಕ್ಷಿಗಿಂತ ಒಳ್ಳೆಯ ನ್ಯಾಯಾಲಯ ಮತ್ತೊಂದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಉಪಪೊಲೀಸ್ ಆಯುಕ್ತ ವೈ.ಕೆ. ಕಾಶಪ್ಪನವರ ಮಾತನಾಡಿ, ಪೊಲೀಸರು ಅಸಹಾಯಕರ ನೆರವಿಗೆ ಧಾವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮ ಆರೋಗ್ಯದ ಕಡೆಯೂ ಗಮನ ಹರಿಸಿ, ಕುಟುಂಬದವರಿಗೂ ಸಮಯ ಮೀಸಲಿಡಿ ಎಂದು ಹೇಳಿದರು.
ಸಶಸ್ತ್ರ ಮೀಸಲು ಪಡೆಯ ಆರಕ್ಷಕ ನಿರೀಕ್ಷಕ ಮಾರುತಿ ಹೆಗಡೆ, ಪ್ರವಿಣ ಕಂಕಣವಾಡಿ, ಉಪ ಆರಕ್ಷಕ ನಿರೀಕ್ಷಕ ಬಾಗಣ್ಣ ವಾಲೀಕಾರ, ಜಗದೀಶ ಉಪಸ್ಥಿತರಿದ್ದರು. ನಿಖಿಲ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.