ಗಸ್ತು ಸಿಬ್ಬಂದಿ ನಿಯೋಜಿಸಿ ಮಾಹಿತಿ ಸಂಗ್ರಹಿಸಿ: ಗೃಹಸಚಿವ ಡಾ.ಜಿ.ಪರಮೇಶ್ವರ ಸೂಚನೆ

Police Department Progress Review Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾವಳಿ ಹೆಚ್ಚಾಗಿ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕೆ.ಆರ್.ಪೇಟೆ, ಬಸರಾಳು, ಕೊಪ್ಪ ಭಾಗದಲ್ಲಿ ಹೆಚ್ಚಾಗಿದೆ. ಗಸ್ತು ಸಿಬ್ಬಂದಿ ಈ ಸಂಬಂಧ ಮಾಹಿತಿ ಸಂಗ್ರಹಿಸಿ ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ರಮ ಮರಳು ದಂಧೆಗೆ ಇಲಾಖೆ ಸಿಬ್ಬಂದಿಯೇ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಆರೋಪಿಗಳ ಜತೆ ಪೊಲೀಸರು ಕೈಜೋಡಿಸುವುದು ಕಂಡು ಬಂದರೆ ಸಹಿಸುವುದಿಲ್ಲ. ಒಂದು ವೇಳೆ ಇಂತಹ ಕೆಲಸ ಮುಂದುವರೆಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದರು.

ಡ್ರಗ್ಸ್ ಚಟುವಟಿಕೆಗಳು ಕಂಡು ಬಂದರೆ ಆಯಾ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಸದನದಲ್ಲಿ ತಿಳಿಸಿದ್ದೇವೆ. ಇದಕ್ಕೆ ಬದ್ಧವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕಿದೆ. ಡ್ರಗ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕೋಮು ಸಂಘರ್ಷಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವ ರೌಡಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ. ನಿಮಗೆ ಲಾಠಿ, ಗನ್ ಸುಮ್ಮನೆ ನೀಡಿಲ್ಲ. ಸಂದರ್ಭ ಬಂದಾಗ ಬಳಸಿ. ನಿಮ್ಮೊಂದಿಗೆ ಸರ್ಕಾರ ನಿಲ್ಲುತ್ತದೆ. ಪೊಲೀಸ್ ಅಂದರೆ ಕಾನೂನು. ಕಾನೂನಿಗೆ ಗೂಂಡಾಗಳು ಹೆದರಬೇಕು. ದ್ವಿಚಕ್ರ ವಾಹನಗಳಲ್ಲಿ ಗಸ್ತು ತಿರುಗಿದರೆ ಘಟನೆ ಏನೆಂಬುದು ಗೊತ್ತಾಗುವುದಿಲ್ಲ. ಗಸ್ತು ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು ಅರಿಯಬೇಕು. ಸ್ಥಳೀಯ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.

ಎಸ್‌ಸಿ, ಎಸ್‌ಟಿ ಸಮುದಾಯವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಅನ್ಯಾಯಕ್ಕೆ ಒಳಗಾದವರ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಸಮಾಜದಲ್ಲಿ ಯಾರು ನ್ಯಾಯ ಕೇಳಿಕೊಂಡು ಠಾಣೆಗೆ ಬರುತ್ತಾರೆ. ಅವರ ಪರ ನಿಲ್ಲಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನೊಂದವರು, ಬಡವರಿಗೆ ರಕ್ಷಣೆ ನೀಡುವುದು ಮತ್ತು ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆ. ಜಾತಿ, ಧರ್ಮ, ಪಕ್ಷ ನೋಡುವುದು ಸರಿಯಲ್ಲ. ಪೊಲೀಸ್ ಸರ್ಕಾರದ ಮುಖ. ರಾಜ್ಯದಲ್ಲಿ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪೊಲೀಸರಿಗೆ ಗೊತ್ತಿರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net