

ಮಂಡ್ಯ: ಸದೃಢ ಆರೋಗ್ಯದ ಬಗ್ಗೆ ಜಾಗೃತಿ, ಮಾದಕ ವಸ್ತು ಮುಕ್ತ ಕರ್ನಾಟಕ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಮಾ.9ರಂದು ನಗರದಲ್ಲಿ ಮ್ಯಾರಥಾನ್ ಓಟ ಆಯೋಜಿಸಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಟೀ ಶರ್ಟ್ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಸ್ಪರ್ಧಾಳುಗಳು ಮ್ಯಾರಥಾನ್ ಓಟದಲ್ಲಿ ಭಾಗವಹಿಸಬಹುದು. ಐದು ಕಿ.ಮೀ ಹಾಗೂ ಹತ್ತು ಕಿ.ಮೀ ಮ್ಯಾರಥಾನ್ ಓಟ ಸ್ಪರ್ಧೆ ನಡೆಯಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಅದೇ ರೀತಿ ಸ್ಪರ್ಧೆಯ ದಿನವೇ ಭಾಗವಹಿಸಬಹುದು. ಅಂದು ಬೆಳಗ್ಗೆ 6 ಗಂಟೆಯೊಳಗೆ ಎಲ್ಲರೂ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಎರಡು ವಿಭಾಗಕ್ಕೂ ಪ್ರತ್ಯೇಕ ರೂಟ್‌ಮ್ಯಾಪ್ ಮಾಡಲಾಗಿದೆ. 7 ಗಂಟೆಗೆ ಪ್ರಾರಂಭವಾಗುವ ಓಟ ಸರ್‌ಎಂವಿ ಕ್ರೀಡಾಂಗಣದಲ್ಲಿಯೇ ಮುಕ್ತಾಯವಾಗಲಿದೆ ಎಂದರು.
ಈಗಾಗಲೇ 300ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಂತೆಯೇ 600 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಕಲಾವಿದರಾದ ರಿಷಿ, ನವೀನ್ ಸಜ್ಜು ಭಾಗವಹಿಸಲಿದ್ದಾರೆ. ಇವರೊಟ್ಟಿಗೆ ಬಿಗ್‌ಬಾಸ್ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು. ಐದು ಕಿ.ಮೀ ಓಟದ ವಿಜೇತರಿಗೆ 5 ಸಾವಿರ ರೂ ಪ್ರಥಮ, 3 ಸಾವಿರ ರೂ ದ್ವಿತೀಯ ಹಾಗೂ 2 ಸಾವಿರ ರೂ ತೃತೀಯ ಬಹುಮಾನ ಇರಲಿದೆ. ಇನ್ನು 10 ಕಿ.ಮೀ ಓಟದ ಸ್ಪರ್ಧೆಯಲ್ಲಿ ಗೆಲ್ಲುವವರಿಗೆ 10 ಸಾವಿರ ರೂ ಮೊದಲ, 5 ಸಾವಿರ ರೂ ಎರಡನೇ ಹಾಗೂ 3 ಸಾವಿರ ರೂ ತೃತೀಯ ಬಹುಮಾನ ನೀಡಲಾಗುವುದು. ಎಲ್ಲರೂ ಆಗಮಿಸಿ ಪೊಲೀಸರೊಂದಿಗೆ ಓಟದ ಸ್ಪರ್ಧೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಇದ್ದರು.