

ಚಿಕ್ಕಬಳ್ಳಾಪುರ: ಕಾನೂನು ನಿಯಮಬಾಹಿರವಾಗಿ ಅಪ್ರಾಪ್ತರ ವಾಹನ ಚಾಲನೆಯ ಚಾಳಿಗೆ ಜಿಲ್ಲಾ ಪೊಲೀಸ್ ಇಲಾಖೆಯು ತಕ್ಕ ಪಾಠ ಕಲಿಸುವುದನ್ನು ಬಿರುಸುಗೊಳಿಸಿದೆ.
ಹೌದು! ಹಲವು ಎಚ್ಚರಿಕೆಯ ಸೂಚನೆಗಳು, ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಗಲ್ಲಿ ಗಲ್ಲಿಯಲ್ಲಿ ಅಪ್ರಾಪ್ತರು ದ್ವಿಚಕ್ರ ವಾಹನಗಳನ್ನು ವೇಗವಾಗಿ ಓಡಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಆಯಾ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಿ, ಗಾಡಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಹಾಗೆಯೇ ಅಪ್ರಾಪ್ತರಿಗೂ ಹಾಗೂ ಅವರ ಪಾಲಕರಿಗೂ ದಂಡ ದಶಗುಣಂ ತತ್ವದೊಂದಿಗೆ ಪಾಠ ಕಲಿಸಲಾಗುತ್ತಿದೆ.
೧೮ ವರ್ಷದೊಳಗಿನವರು ವಾಹನ ಚಾಲನೆ ಮಾಡುವಂತಿಲ್ಲ. ನಿಗದಿತ ವಯಸ್ಸಿನ ಬಳಿಕ ನಿಯಮಾನುಸಾರ ಕಲಿಕಾ ಪರವಾನಗಿ ಪಡೆದುಕೊಂಡು ಕಲಿಯಬೇಕು ಹಾಗೂ ನಿರ್ದಿಷ್ಟ ಅವಧಿಯಲ್ಲಿ ನಿಯಮಾನುಸಾರ ಕೈಗೊಂಡು ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕು. ಇಂತಹವರಿಗೆ ಮಾತ್ರ ವಾಹನ ಚಾಲನಾ ಪರವಾನಗಿ ಸಿಗುತ್ತದೆ.
*ಇಲಾಖೆಯ ಮೊದಲ ಪಾಠ*
ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯು ನಿರಂತರವಾಗಿ ಕಾನೂನು ನಿಯಮಗಳು, ರಕ್ಷಣಾತ್ಮಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ಹಾಗೆಯೇ ಠಾಣೆಗಳಿಗೂ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮಾಜದಲ್ಲಿನ ನಾಗರಿಕ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇದರ ನಡುವೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ಇದರಲ್ಲಿ ಮೊದಲು ಜೋರಾಗಿ ಕರ್ಕಶ ಧ್ವನಿ ಹೊರಸೂಸುವ ರೀತಿಯಲ್ಲಿ ಮಾರ್ಪಡಿಸಲಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ರಸ್ತೆಗಳಲ್ಲಿ ಸಾಮೂಹಿಕವಾಗಿ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯಿತು. ಇದೀಗ ಎರಡನೇ ಹಂತದಲ್ಲಿ ಅಪ್ರಾಪ್ತ ವಾಹನ ಚಾಲನೆಯನ್ನು ಪತ್ತೆ ಹಚ್ಚಿ, ಪಾಠ ಕಲಿಸುವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ವೃತ್ತದ ಠಾಣಾ ವ್ಯಾಪ್ತಿಗಳಲ್ಲಿ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಚಲಾಯಿಸುತ್ತಿದ್ದ 50 ದ್ವಿಚಕ್ರ ವಾಹನಗಳು, ಬಾಗೇಪಲ್ಲಿ ಠಾಣೆಯ ವ್ಯಾಪ್ತಿಯಲ್ಲಿ 38 ದ್ವಿಚಕ್ರ ವಾಹನಗಳನ್ನು ಮೋಟಾರು ವಾಹನ ತಿದ್ದುಪಡಿ ಕಾಯಿದೆ, 2019ರ ಸೆಕ್ಷನ್ 199A ಅಡಿಯಲ್ಲಿ ಜಪ್ತಿ ಮಾಡಲಾಗಿದೆ. ಇದರ ಪ್ರಕ್ರಿಯೆ ಮುಂದುವರೆದಿದೆ.
*ಮೋಟಾರು ವಾಹನ ತಿದ್ದುಪಡಿ ಕಾಯಿದೆ ಪ್ರಕಾರ ಅಪ್ರಾಪ್ತರಿಗೆ ವಾಹನ ನೀಡುವ ಪಾಲಕರು ಇಲ್ಲವೇ ಮಾಲೀಕರಿಗೆ ₹25,000 ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಹಾಗೆಯೇ ಸಂಬಂಧಪಟ್ಟ ವಾಹನದ ನೋಂದಣಿಯನ್ನು 12 ತಿಂಗಳವರೆಗೆ ರದ್ದುಗೊಳಿಸಬಹುದು. ಇದರ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ.
ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ